ಕೋಲಾರ : ಜಿಲ್ಲೆಯ ಬಂಗಾರಪೇಟೆ ಹೊರವಲಯದ ಮಲ್ಲಯ್ಯನಗುರ್ಕಿ ಗ್ರಾಮದ ರಸ್ತೆಯ ಅಂಡರ್ಪಾಸ್ ಬಳಿ ಇಂದು ಬೆಳಗ್ಗೆ ಆಟೋವೊಂದರಲ್ಲಿ ಅರೆಬೆಂದ ಶವ ಪತ್ತೆಯಾಗಿದೆ.
ಕಳೆದ ರಾತ್ರಿ ಯಾರೋ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ನಂತರ ಶವವನ್ನು ಆಟೋದಲ್ಲಿ ಹಾಕಿಕೊಂಡು ಬಂದು ನಂತರ ಆಟೋ ಸಮೇತ ಬೆಂಕಿ ಹಚ್ಚಿಹೋಗಿದ್ದಾರೆ. ಸದ್ಯ ಗುರುತು ಸಿಗದಷ್ಟು ದೇಹ ಸುಟ್ಟು ಕರಕಲಾಗಿದೆ.
ಸದ್ಯ ಸ್ಥಳಕ್ಕೆ ಎಸ್ಪಿ ಇಲಕ್ಕಿಯಾ ಕರುಣಾಗರನ್ ಹಾಗೂ ಎಎಸ್ಪಿ ಉಮೇಶ್ ಸೇರಿದಂತೆ ಪಿಂಗರ್ ಪ್ರಿಂಟ್ ಹಾಗೂ ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆಟೋ ನಂಬರ್ ಪ್ಲೇಟ್ ಆಧರಿಸಿ ಕೊಲೆಯಾದವನ ಗುರುತು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ.
ಪುಂಡ, ಪೋಕರಿಗಳ ಹುಚ್ಚಾಟಕ್ಕೆ ಕಡಿವಾಣ ಹಾಕಲು ಮನವಿ
ಇನ್ನು, ಬಂಗಾರಪೇಟೆ ಪಟ್ಟಣದ ಹೊರವಲಯದಲ್ಲಿನ ಕೆಜಿಎಫ್ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಜನರ ಓಡಾಟ ತೀರಾ ವಿರಳ. ಅದರಲ್ಲೂ ಸಂಜೆಯಾದ ಮೇಲಂತೂ ಜನರ ಓಡಾಟ ಇರೋದಿಲ್ಲ. ಇಂತಹ ವೇಳೆ ಪುಂಡ ಪೋಕರಿಗಳು ಬಂದು ಕುಳಿತು ಕುಡಿಯೋದು, ಗಲಾಟೆ ಮಾಡಿಕೊಳ್ಳೋದು ಇಲ್ಲಿ ಕಾಮನ್ ಆಗಿದೆ.
ಅಷ್ಟೇ ಅಲ್ಲ, ಈಗಾಗಲೇ ಹಲವಾರು ಬಾರಿ ಕೊಲೆ ಮಾಡಿದ ಶವಗಳನ್ನು ಇದೇ ರಸ್ತೆಯಲ್ಲಿ ತಂದು ಬಿಸಾಡಿ ಹೋಗಿರುವ ಉದಾಹರಣೆಗಳಿವೆ. ಹಾಗಾಗಿ, ಈ ಭಾಗದ ಗ್ರಾಮಗಳ ಜನರು ಕೂಡ ಪೊಲೀಸ್ ಇಲಾಖೆಗೆ ಈ ಪ್ರದೇಶದಲ್ಲಿ ಪುಂಡ ಪೋಕರಿಗಳ ಉಪಟಳಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ.