ಕೋಲಾರ: ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯರನ್ನು ಸಹ ಪ್ರಯಾಣಿಕ ಯುವಕನೊಬ್ಬ ಚುಡಾಯಿಸಿದ್ದಕ್ಕೆ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ಗ್ರಾಮದ ಬಳಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಬು ಥಳಿತಕ್ಕೊಳಗಾದ ಯುವಕ. ಅಭಿ, ನಾಗೇಂದ್ರ, ಗಂಗಾಧರ್, ನರೇಷ್ ಎನ್ನುವ ಯುವಕರು ಹೊಡೆದಿದ್ದಾರೆ ಎಂದು ಹೇಳಲಾಗಿದೆ. ಗೌನಿಪಲ್ಲಿ ಗ್ರಾಮದಿಂದ ಶ್ರೀನಿವಾಸಪುರಕ್ಕೆ ಬಸ್ ಹೋಗುತ್ತಿತ್ತು. ಈ ಸಂದರ್ಭದಲ್ಲಿ ತಾಡಿಗೋಳ್ ಗ್ರಾಮದ ಯುವತಿಯರನ್ನು ಬಾಬು ಹಾಗೂ ಮತ್ತೊಬ್ಬ ಯುವಕ ಚುಡಾಯಿಸುತ್ತಿದ್ದರು. ಯುವತಿಯ ಕಡೆಯವರು ಇರ್ವರಿಗೂ ಬುದ್ಧಿವಾದ ಹೇಳಿ ಎಚ್ಚರಿಕೆ ನೀಡಿದರೂ ತಮ್ಮ ಚಾಳಿ ಮುಂದುವರೆಸಿದ್ದರು.
ಇದರಿಂದ ಬೆಸತ್ತ ಯುವತಿ ಕಡೆಯವರು ಬಾಬುವಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಘಟನೆಯ ವಿಡಿಯೋವನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ. ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.