ಕೋಲಾರ: ಏಳು ವರ್ಷದ ಹಿಂದಿನ ಸುಪಾರಿ ಕೊಲೆಯ ಆರೋಪಿಗಳು ಬಾಯ್ಬಿಟ್ಟ ರಹಸ್ಯವನ್ನು ಭೇದಿಸಲು ಮುಂದಾಗಿರುವ ಪೊಲೀಸರು ಕೆರೆಯ ನೀರನ್ನು ಖಾಲಿ ಮಾಡಿಸಿ, ಶವ ಪತ್ತೆ ಹಚ್ಚಿದ್ದಾರೆ. ಎರಡು ತಿಂಗಳ ಹಿಂದೆ ಕೆರೆಯ ನೀರನ್ನ ಖಾಲಿ ಮಾಡಿದ ಹಿನ್ನೆಲೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೀಗ ಗುರುವಾರ ಕೆರೆಯಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಶೋಧ ನಡೆಸಿ, ಶವವನ್ನು ಹೊರತೆಗೆದಿದ್ದಾರೆ.
ಮುಳಬಾಗಿಲು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣದ ಆರೋಪಿಗಳು ನೀಡಿದ ಮತ್ತೊಂದು ಕೊಲೆ ಪ್ರಕರಣದ ಸುಳಿವಿನ ಮೇರೆಗೆ, ಪೊಲೀಸರು ಸಾಕ್ಷಿ ಸಂಗ್ರಹಕ್ಕೆ ಮುಂದಾಗಿದ್ದರು. ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣದ ಆರೋಪಿಗಳು ತನಿಖೆ ವೇಳೆ ಪೇಂಟರ್ ರಮೇಶ್ (31) ಎಂಬಾತನನ್ನ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದರು. 2015 ಏಪ್ರಿಲ್ 30 ರಂದು ನಿರ್ಜನ ಪ್ರದೇಶದಲ್ಲಿ ರಮೇಶ್ನನ್ನು ಕೊಲೆ ಮಾಡಿರುವುದಾಗಿ ಜಗನ್ ಎಂಬ ಆರೋಪಿ ತಪ್ಪೊಪ್ಪಿಕೊಂಡಿದ್ದ. ಪೇಂಟರ್ ರಮೇಶ್ ಕೊಲೆ ಮಾಡಲು 1 ಲಕ್ಷಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಸುಪಾರಿ ಕೊಟ್ಟಿದ್ದರು ಎಂದು ಆರೋಪಿಗಳು ಬಾಯ್ಬಿಟ್ಟಿದ್ದರು.
ಆರೋಪಿಗಳ ಮಾಹಿತಿ ಆಧರಿಸಿ, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೆರೆಯಲ್ಲಿ ಹೂತಿದ್ದ ಶವವನ್ನು ಇದೀಗ ಹೊರೆತೆಗದಿದ್ದಾರೆ. ಕೋಲಾರದ ಮುಳಬಾಗಿಲು ತಾಲೂಕಿನ ಕದರಿಪುರ ಕೆರೆಯಲ್ಲಿ ಮುಳಬಾಗಿಲು ತಹಶೀಲ್ದಾರ್ ಶೋಭಿತಾ, ತನಿಖಾಧಿಕಾರಿ ವಸಂತ್, ವೈದ್ಯರ ಸಮ್ಮುಖದಲ್ಲಿ ಶವ ಹೊರತೆಗೆದು ಮರು ಮರಣೋತ್ತರ ಪರೀಕ್ಷೆ ಮಾಡಿದರು.
ಇದನ್ನೂ ಓದಿ: ಕೋಲಾರ: ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಸುಫಾರಿ ಕಿಲ್ಲರ್ ಕಾಲಿಗೆ ಗುಂಡೇಟು