ಕೋಲಾರ: ಸಿಎಂ ಯಡಿಯೂರಪ್ಪ ಅವರು ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವುದು ತಪ್ಪಿಲ್ಲ ಎಂದು ನಗರದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಇಂದು ಕೋಲಾರಕ್ಕೆ ಆಗಮಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಹುಟ್ಟಿ ಬೆಳೆದಿರುವಂತಹ ಎಲ್ಲಾ ಜನಾಂಗದ ಜನ ಇದ್ದಾರೆ. ಹೀಗಾಗಿ ಮರಾಠಿಗರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದರಲ್ಲಿ ತಪ್ಪಿಲ್ಲ ಎಂದರು. ಇನ್ನು ಕುವೆಂಪು ಅವರು ಹೇಳಿದ ಹಾಗೆ ಸರ್ವ ಜನಾಂಗದ ಬೀಡು ಕರ್ನಾಟಕವಾಗಿದ್ದು, ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರವಾಗಿ ತಪ್ಪು ಗ್ರಹಿಕೆ ಬೇಡ. ಅಲ್ಲದೆ ಮರಾಠಿ ಮಾತನಾಡಿದ ತಕ್ಷಣ ಅವರು ನಮಗೆ ವೈರಿಗಳಾಗುವುದಿಲ್ಲ. ಅವರು ನಮ್ಮ ಜೊತೆಯಲ್ಲಿಯೇ ಇರುವಂತಹವರು, ನಮ್ಮಲ್ಲೇ ಹುಟ್ಟಿರುವಂತಹವರು. ಇದರಿಂದ ಅವರನ್ನು ಕಡೆಗಣಿಸಲು ಆಗುವುದಿಲ್ಲ ಎಂದರು.
ಇನ್ನು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರದಲ್ಲೂ ತಪ್ಪು ಗ್ರಹಿಕೆ ಮಾಡುವುದು ಬೇಡ. ಎಲ್ಲರನ್ನೂ ಸಮಾನವಾಗಿ ನೋಡಬೇಕೆಂದು ಬಸವಣ್ಣನವರು ಹೇಳಿದ್ದು ಅವರ ದೊಡ್ಡತನವಾಗಿದೆ ಎಂದರು. ಅಲ್ಲದೆ ವೀರಶೈವ ಲಿಂಗಾಯತರಲ್ಲಿಯೂ ಭಿಕ್ಷೆ ಬೇಡುವಂತಹವರು ಇದ್ದಾರೆ. ಕೂಲಿ ಕಾರ್ಮಿಕರು ಇದ್ದಾರೆ, ಜೊತೆಗೆ ಎಲ್ಲದರಲ್ಲೂ ಮುಂದುವರೆದವರು ಇಲ್ಲ. ಹೀಗಾಗಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಹಿಂದಿನಿಂದಲೂ ಬೇಡಿಕೆ ಇತ್ತು. ಒಕ್ಕೊರಲಿನ ಒತ್ತಾಯವಿತ್ತು. ಹೀಗಾಗಿ ನಿಮಗ ಸ್ಥಾಪನೆ ಮಾಡಿರುವುದಕ್ಕೆ ಸಿಎಂ ಅವರಿಗೆ ಅಭಿನಂದೆನೆಗಳು ಎಂದರು.