ಕೋಲಾರ : ಗರ್ಭಿಣಿ ಮಹಿಳೆಯರು ಮತ್ತು ಬಾಣಂತಿಯರಿಗೆ ಅರವಳಿಕೆ ಚುಚ್ಚುಮದ್ದು ನೀಡುವ ವೈದ್ಯರಲ್ಲೇ ಕೊರೊನಾ ಸೋಂಕು ತಗಲುವ ಮೂಲಕ ಆಸ್ಪತ್ರೆಯ ಸಿಬ್ಬಂದಿ ಹಾಗೂ ಆಸ್ಪತ್ರೆಗೆ ಬಂದಿದ್ದ ರೋಗಿಗಳಲ್ಲಿ ಆತಂಕ ಮನೆ ಮಾಡಿದೆ. ಸದ್ಯ ಎರಡು ದಿನಗಳ ಕಾಲ ಬಂಗಾರಪೇಟೆ ತಾಲೂಕು ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದ್ದು, ಸೋಂಕಿತರ ಸಂಪರ್ಕಿತರನ್ನು ಹುಡುಕುವ ಕೆಲಸ ನಡೆಯುತ್ತಿದೆ.
ಬಂಗಾರಪೇಟೆ ತಾಲೂಕು ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರೊಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅವರ ಪ್ರಾಥಮಿಕ ಸಂಪರ್ಕ ಹೊಂದಿದ್ದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಜೊತೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ರೋಗಿಗಳಲ್ಲೂ ಈಗ ಆತಂಕ ಮನೆ ಮಾಡಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ರೋಗಿಗಳಿಗೆ ವೈದ್ಯರಿಂದ ಸೋಂಕು ಹರಡಿಸಿರುವ ಸಾಧ್ಯತೆಯಿದೆ.
ಜೊತೆಗೆ ವೈದ್ಯರ ಪ್ರಾಥಮಿಕ ಸಂಪರ್ಕದಲ್ಲಿದ್ದ ಸಿಬ್ಬಂದಿಗೂ ಸೋಂಕು ತಗುಲಿರುವ ಸಾಧ್ಯತೆ ಇದೆ. ಈ ಹಿನ್ನೆಲೆ ಈಗಾಗಲೇ 20 ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಿ ಅವರನ್ನು ಕೋವಿಡ್ ಟೆಸ್ಟ್ಗೆ ಒಳಪಡಿಸಲಾಗಿದೆ. ಕೊರೊನಾ ಸೇರಿ ಹಲವು ಚಿಕಿತ್ಸೆಗಳಿಗಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಆಸ್ಪತ್ರೆಯಲ್ಲೇ ಕೊರೊನಾ ಹೆಗಲೇರುವ ಸಾಧ್ಯತೆಯಿದೆ. ಸದ್ಯ ಸೋಂಕಿತ ವೈದ್ಯ ಅರವಳಿಕೆ ತಜ್ಞನಾಗಿದ್ದು ಈತನಿಂದ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಸೋಂಕು ತಗುಲಿರುವ ಆತಂಕ ಎದುರಾಗಿದೆ.
ಈಗಾಗಲೇ ಕಾರ್ಯಪ್ರವೃತ್ತವಾಗಿರುವ ಆರೋಗ್ಯ ಇಲಾಖೆ ಕಳೆದ ಎರಡು ಮೂರು ದಿನಗಳಲ್ಲಿ ಈ ವೈದ್ಯರನ್ನು ಸಂಪರ್ಕಿಸಿದ್ದ ರೋಗಿಗಳನ್ನು ಹುಡುಕಿ ಅವರಲ್ಲಿ ರೋಗ ಲಕ್ಷಣಗಳಿದ್ದರೆ ಅವರನ್ನೂ ಕೋವಿಡ್ ಟೆಸ್ಟ್ಗೆ ಒಳಪಡಿಸುವ ಕೆಲಸ ಮಾಡುತ್ತಿದೆ. ವೈದ್ಯರಿಂದ ಸಿಬ್ಬಂದಿಗೆ ಸೋಂಕು, ಸಿಬ್ಬಂದಿಯಿಂದ ಆಸ್ಪತ್ರೆಗೆ ಬಂದಿರುವ ರೋಗಿಗಳಿಗೆ ಸೋಂಕು ಹೀಗೆ ಕೊರೊನಾ ಮಾಹಾಮಾರಿ ಅದೆಷ್ಟು ಜನರಿಗೆ ವಕ್ಕರಿಸಿದ್ಯೋ ಅನ್ನೋ ಆತಂಕ ಕೂಡ ಆರೋಗ್ಯ ಇಲಾಖೆ ಅಧಿಕಾರಿಗಳಲ್ಲಿ ಮನೆ ಮಾಡಿದೆ. ಅದರಲ್ಲಿಯೂ ಹೆಚ್ಚಾಗಿ ಬಾಣಂತಿಯರು, ಗರ್ಭಿಣಿ ಮತ್ತು ಮಕ್ಕಳಿಗೆ ಸೋಂಕು ಹರಡಿರುವ ಸಾಧ್ಯತೆ ಹೆಚ್ಚಾಗಿದೆ.