ಕೋಲಾರ: ಸ್ವಾವಲಂಬಿ, 'ಆತ್ಮ ನಿರ್ಭರ್ ಭಾರತ್' ಮಾಡುವುದು ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯಾಗಿದೆ ಎಂದು ಕೋಲಾರದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮೋದಿ 2.0 ಸರ್ಕಾರದ ಪ್ರಥಮ ವರ್ಷದ ಸಾಧನೆಗಳ ಕುರಿತು ಗುಣಗಾನ ಮಾಡಿದರು. ಅಲ್ಲದೆ ಭಾರತವನ್ನು ಸ್ವಾವಲಂಬಿಯನ್ನಾಗಿಸುವುದೇ ಮೋದಿಯ ಸಂಕಲ್ಪವಾಗಿದೆ ಎಂದರು.
ರಾಮಮಂದಿರ, ತ್ರಿವಳಿ ತಲಾಕ್, 370ನೇ ವಿಧಿ ರದ್ಧು, ಪೌರತ್ವ ಕಾಯ್ದೆ ತಿದ್ದುಪಡಿ, ಭಯೋತ್ಪಾದನೆ, ಲಾಕ್ಡೌನ್ ವೇಳೆ ವಿಶೇಷ ಪ್ಯಾಕೇಜ್ ಘೋಷಣೆ ಸೇರಿದಂತೆ, ಮೋದಿ ಅವಧಿಯಲ್ಲಿ ನಡೆದ ಅಭಿವೃದ್ಧಿಯನ್ನು ಸ್ಮರಿಸಿದರು.
ಬಿಜೆಪಿಯಲ್ಲಿ ಎದ್ದಿರುವ ಬಂಡಾಯ ಕುರಿತು ಮಾತನಾಡಿದ ಅವರು, ಮಾಜಿ ಸಚಿವ ಉಮೇಶ್ ಕತ್ತಿ ಅವರ ಮನೆಯಲ್ಲಿ ಎಲ್ಲರೂ ಸೇರಿ ರೊಟ್ಟಿ ಊಟ ಮಾಡಿದ್ದಾರೆ. ಹೊರಗೆ ಜನ ಹಾಗೂ ಸುದ್ದಿ ವಾಹಿನಿಗಳು ಮಾತನಾಡುವ ರೀತಿ ಬಿಜೆಪಿ ಸರ್ಕಾರದಲ್ಲಿ ಏನೂ ಆಗಿಲ್ಲ, ಎಲ್ಲವೂ ಸರಿಯಾಗಿದೆ.
ಅಲ್ಲದೆ ಸಿಎಂ ಯಡಿಯೂರಪ್ಪನವರು ಮುಂದಿನ 3 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲ್ಲಿದ್ದಾರೆ. ಈಗಾಗಲೇ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೂಡ ಸ್ಪಷ್ಟಪಡಿಸಿದ್ದಾರೆ. ನನ್ನ ಬಿಜೆಪಿಯ ಯಾವುದೇ ಕಾರ್ಯಕರ್ತ ಯಾವುದೇ ಜವಾಬ್ದಾರಿ ಕೇಳಬಹುದು, ತಪ್ಪೇನಿದೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಸಂಸದ ಮುನಿಸ್ವಾಮಿ, ಕೆಜಿಎಫ್ ಚಿನ್ನದ ಗಣಿಯಲ್ಲಿ ಚಿನ್ನಕ್ಕಿಂತ ಹೇರಳವಾಗಿ ಪೆಲಾಡಿಯಂ ನಿಕ್ಷೇಪ ಸಿಗುತ್ತದೆ. ಸಚಿವರು ಅಧಿಕಾರಿಗಳ ಗಮನಕ್ಕೆ ತಂದಿದ್ದು, ಆದಷ್ಟು ಬೇಗ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಇನ್ನೂ ಎಸ್‌ಇಜೆಡ್ ಹಾಗೂ ರೈಲ್ ವರ್ಕ್ ಶಾಪ್ ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು. ಇದೇ ವೇಳೆ ಅಬಕಾರಿ ಸಚಿವ ನಾಗೇಶ್ ಸೇರಿದಂತೆ ಹಲವು ಮುಖಂಡರು ಇದ್ದರು.