ಕೋಲಾರ: ಆಂಧ್ರದ ಗಡಿ ಹಾಗೂ ತಮಿಳುನಾಡು ಗಡಿ ಹೊಂದಿಕೊಂಡಿರುವ ಜಿಲ್ಲೆಯ ಹಲವು ಭಾಗಗಳಲ್ಲಿ ಅಕ್ರಮವಾಗಿ ಮದ್ಯ ಸಾಗಣೆ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ಅಬಕಾರಿ ಸಚಿವರ ತವರು ಜಿಲ್ಲೆಯಲ್ಲಿಯೇ ಎಗ್ಗಿಲ್ಲದೇ ಮದ್ಯ ಸಾಗಣೆ ನಡೆಯುತ್ತಿದ್ದು, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಜಿಲ್ಲೆಯ ರಾಜ್ಪೇಟೆ ರಸ್ತೆಯ ಜೆ.ಕೆ.ಪುರಂ ಹಾಗೂ ಪಂತನಹಳ್ಳಿ ಬಳಿಕ ರಾಜ್ಯಕ್ಕೆ ಸೇರಿದ 25ಕ್ಕೂ ಹೆಚ್ಚು ಮದ್ಯದಂಗಡಿಗಳಿವೆ. ಈ ಭಾಗದಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಭರಪೂರ ವ್ಯಾಪಾರ ನಡೆಯುತ್ತದೆ. ಹೊರರಾಜ್ಯದಿಂದ ಬರುವ ಜನರು ಮದ್ಯ ಸೇವಿಸುವ ಜತೆಗೆ ಆಟೋ, ಲಾರಿ, ಕಾರುಗಳಲ್ಲಿ ತುಂಬಿಸಿಕೊಂಡು ಹೋಗುತ್ತಿರುವುದು ಬೆಳಕಿಗೆ ಬಂದಿದೆ. ನಿತ್ಯ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಈ ಮಾರ್ಗವಾಗಿ ಸಾಗಾಟವಾಗುತ್ತಿದ್ದು, ಹೊರ ಜಿಲ್ಲೆಗಳಲ್ಲಿ ಮಾರಾಟವಾಗುತ್ತಿದೆ.
ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಮದ್ಯದ ಬೆಲೆ ಏರಿಕೆ ಇದ್ದರೆ ಹಾಗೂ ಆಲ್ಕೋಹಾಲ್ ಪ್ರಮಾಣ ಇಳಿಕೆ ಮಾಡಲಾಗಿದೆ. ಇಷ್ಟೇ ಅಲ್ಲದೆ ಮಾರಾಟ ಪ್ರಕ್ರಿಯೆಯ ಮೇಲೂ ಹಲವು ನಿಬಂಧನೆ ಹೇರಲಾಗಿದೆ.
ಈ ಹಿನ್ನೆಲೆ ಗಡಿಭಾಗದ ಜನರು ಕೋಲಾರ ಭಾಗಕ್ಕೆ ಬರುತ್ತಿದ್ದು, ಮದ್ಯಕ್ಕೆ ದುಪ್ಪಟ್ಟು ಬೆಲೆ ಹೇಳಿದರೂ ನೀಡಿ ಕೊಂಡೊಯ್ಯುತ್ತಿದ್ದಾರೆ. ಅಲ್ಲದೇ ಬಾರ್ ಮಾಲೀಕರು ಸಹ ಎಂಆರ್ಪಿಗಿಂತಲೂ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಇನ್ನೂ ಈ ಕುರಿತು ಮಾತನಾಡಿದ ಅಬಕಾರಿ ಸಚಿವ ಹೆಚ್.ನಾಗೇಶ್, ಈ ರೀತಿ ಅಕ್ರಮವಾಗಿ ಮದ್ಯ ಸಾಗಿಸುತ್ತಿರುವ ಕುರಿತು ಮಾಹಿತಿ ಬಂದಿದೆ. ಈಗಾಗಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಜೊತೆಗೆ ಆಂಧ್ರದ ಅಬಕಾರಿ ಅಧಿಕಾರಿಗಳ ಜೊತೆಗೆ ಸಂಪರ್ಕ ಸಾಧಿಸಿ ನಿಯಮ ಉಲ್ಲಂಘನೆ ವಿಚಾರ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ.
ಈ ಕುರಿತು ಅಬಕಾರಿ ಡಿಸಿ ರವಿಶಂಕರ್ ಮಾತನಾಡಿ, ಆಂಧ್ರದಲ್ಲಿ ಲಿಕ್ಕರ್ ಪಾಲಿಸಿ ಬದಲಾಗಿದೆ. ಎಲ್ಲಾ ಲಿಕ್ಕರ್ ಶಾಪ್ಗಳನ್ನೂ ಸರ್ಕಾರ ವಹಿಸಿಕೊಂಡಿದೆ. ಅಲ್ಲದೇ ಒಂದು ತಾಲೂಕಿನಲ್ಲಿ ನಾಲ್ಕು ಶಾಪ್ಗಳಿಗೆ ಮಾತ್ರ ಅವಕಾಶವಿದೆ. ಹಾಗಾಗಿ ಅಲ್ಲಿ ಮದ್ಯಕ್ಕೆ ಬೇಡಿಕೆ ಹೆಚ್ಚಾಗಿದೆ. ಆಂಧ್ರದ ಅಧಿಕಾರಿಗಳು ಸಹ ಅವರ ಜಿಲ್ಲೆಯಲ್ಲಿ ನಮ್ಮ ರಾಜ್ಯದ ಮದ್ಯ ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಅವರು ಕೇಸ್ ಹಾಕಿ ಚಾರ್ಜ್ ಶೀಟ್ ಕೂಡ ಹಾಕುತ್ತಿದ್ದಾರೆ ಎಂದಿದ್ದಾರೆ.