ಕೋಲಾರ : 100 ಎಂವಿಎ ಟಿಸಿ ಬರ್ನ್ ಆದ ಪರಿಣಾಮ ಬೆಸ್ಕಾಂ ಸಬ್ ಸ್ಟೇಷನ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಕ್ಕೊಳಗಾದ ಘಟನೆ ಕೋಲಾರದಲ್ಲಿ ಜರುಗಿದೆ.
ಕೋಲಾರದ ಮಹಾಲಕ್ಷ್ಮಿ ಬಡಾವಣೆ ಬಳಿ ಇರುವ ಬೆಸ್ಕಾಂ ಸಬ್ ಸ್ಟೇಷನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಟ್ರಾನ್ಸ್ಫಾರ್ಮರ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ಬೆಂಕಿಗಾಹುತಿಯಾಗಿವೆ. ಆಕಸ್ಮಿಕವಾಗಿ ಬೆಂಕಿ ಕಾಣಿಸಿದ ಹಿನ್ನೆಲೆ ಅಕ್ಕಪಕ್ಕದ ಏರಿಯಾಗಳಿಗೂ ದಟ್ಟವಾದ ಹೊಗೆ ಆವರಿಸಿರೋದ್ರಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಸ್ಕಾಂನ ಸಬ್ ಸ್ಟೇಷನ್ ಹೆಚ್ಚಾಗಿ ಸಾರ್ವಜನಿಕರು ವಹಿವಾಟು ನಡೆಸುವಂತಹ ಸ್ಥಳದಲ್ಲಿರುವುದರಿಂದ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸಾವಿರಾರು ಜನರು ಬೆಂಕಿ ನೋಡಲು ಸ್ಥಳಕ್ಕಾಗಮಿಸಿದರು. ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಸಾರ್ವಜನಿಕರನ್ನು ಚದುರಿಸಿದ್ದಾರೆ.
ಇನ್ನು, ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.