ಕೋಲಾರ: ಅಂಬೇಡ್ಕರ್ ಭವನ ನಿರ್ಮಾಣ ವಿಚಾರವಾಗಿ ಸಮಾಜ ಸೇವಕನಿಗೆ ಬಂಗಾರಪೇಟೆ ಶಾಸಕ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಎಸ್ಪಿ ಅವರಿಗೆ ದೂರು ನೀಡಲಾಗಿದೆ.
ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಸಮಾಜ ಸೇವಕ ಶ್ರೀಧರ್ ಎಂಬುವವರಿಗೆ ಅವರ ಸಹಚರರಿಂದ ಪ್ರಾಣ ಬೆದರಿಕೆ ಹಾಕಿರುವುದಾಗಿ ಆರೋಪಿಸಿ, ನನ್ನ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಕೋರಿ, ಕೆಜಿಎಫ್ ಎಸ್ಪಿ ಧರಣಿ ದೇವಿ ಅವರಿಗೆ ಶ್ರೀಧರ್ ದೂರು ಸಲ್ಲಿಸಿದ್ದಾರೆ.
ಬಂಗಾರಪೇಟೆ ಪಟ್ಟಣದ ಒಬ್ಬಟ್ಟು ಕೆರೆಯಲ್ಲಿ ಅಕ್ರಮವಾಗಿ ಅಂಬೇಡ್ಕರ್ ಭವನ ನಿರ್ಮಾಣ ಮಾಡುತ್ತಿದ್ದಾರೆಂದು ಆರೋಪಿಸಿ, ಸಮಾಜ ಸೇವಕ ಶ್ರೀಧರ್ ನ್ಯಾಯಾಲಯದಲ್ಲಿ ಧಾವೆ ಹೂಡಿದ್ರು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮಧ್ಯಂತರ ತಡೆಯಾಜ್ಞೆ ತರಲಾಗಿತ್ತು.
ಅಲ್ಲದೇ ಒಬ್ಬಟ್ಟು ಕೆರೆ ಪ್ರದೇಶದಲ್ಲಿ ಅನಧಿಕೃತವಾಗಿ 2 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮುಂದಾಗಿದ್ದು, ಅಲ್ಲಿನ ಒತ್ತುವರಿಯನ್ನು ಸಂಪೂರ್ಣವಾಗಿ ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಗೆ ನ್ಯಾಯಾಲಯ ಸೂಚನೆ ನೀಡಿತ್ತು. ಇದಾದ ಬಳಿಕ ಶಾಸಕರ ಸಹಚರರು, ಶ್ರೀಧರ್ಗೆ ಬೆದರಿಕೆ ಹಾಕಿ ಮನೆ ಮುಂದೆ ಧರಣಿ ಮಾಡುವುದಾಗಿ ಹೇಳಿದ್ದಾರೆ.
ಅಲ್ಲದೇ ಅ.19ರೊಳಗೆ ಪ್ರಕರಣ ಇತ್ಯರ್ಥವಾಗದಿದ್ದಲ್ಲಿ ಬಂಗಾರಪೇಟೆ ಬಂದ್ ಮಾಡುವ ಧಮಕಿ ಹಾಕಿದ್ದು, ನನಗೆ ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಶ್ರೀಧರ್ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಆರ್ಎಸ್ಎಸ್ ಮುಖಂಡನ ಕಾರಿನ ಮೇಲೆ ಜಿಹಾದ್ ಎಂದು ಬರೆದು ಕೊಲೆ ಬೆದರಿಕೆ