ಕೋಲಾರ: ಕೋಲಾರದಲ್ಲಿ ಕೊರೊನಾ ತನ್ನ ನಾಗಾಲೋಟ ಮುಂದುವರೆಸಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 16ಕ್ಕೇರಿದೆ.
ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಜನರು ಆತಂಕಕ್ಕೊಳಗಾಗಿದ್ದಾರೆ. ಜಿಲ್ಲೆಯ ಮುಳಬಾಗಿಲು ತಾಲೂಕಿನ 48 ವರ್ಷದ ವಯಸ್ಸಿನ ವ್ಯಕ್ತಿಗೆ ಸೋಂಕು ತಗುಲಿದೆ. ಇನ್ನು ಈತ ಡ್ರೈವರ್ ಕೆಲಸ ಮಾಡಿಕೊಂಡಿದ್ದು, ಚೆನ್ನೈಗೆ ಹೋಗಿ ಬಂದ ಹಿನ್ನೆಲೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಇದೀಗ ಈತನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸುಮಾರು 60 ವರ್ಷದ ವಯಸ್ಸಿನ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, ಆಂಧ್ರದ ಪುಂಗನೂರಿನ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈತ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದು, ಇಬ್ಬರಿಗೆ ಸೋಂಕು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 16ಕ್ಕೇರಿದೆ.
ಸದ್ಯ ಇಬ್ಬರನ್ನೂ ಕೋಲಾರ ಕೋವಿಡ್-19 ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ. ಇನ್ನು ಇಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಶಾಮೀರ್ ಮೊಹಲ್ಲಾ ನಗರವನ್ನ ಕಂಟೇನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ.
ಅಲ್ಲದೆ ಶ್ರೀನಿವಾಸಪುರ ಪಟ್ಟಣದ ಈಚಲಕುಂಟೆ ಕೆರೆ ಪ್ರದೇಶವನ್ನ ಸಹ ಕಂಟೇನ್ಮೆಂಟ್ ಝೋನ್ ಆಗಿ ಘೋಷಣೆ ಮಾಡಿದ್ದು, ಎರಡೂ ಪ್ರದೇಶದ ಜನರು ಹೊರ ಹೋಗದಂತೆ ಎಚ್ಚರ ವಹಿಸಲಾಗಿದೆ. ಜೊತೆಗೆ ಹೊರಗಿನವರ ಪ್ರವೇಶಕ್ಕೂ ಸಹ ನಿರ್ಬಂಧ ಹೇರಲಾಗಿದೆ.