ಕೋಲಾರ: ಜಿಲ್ಲೆಯ ಹಸುಗಳಲ್ಲಿ ಚರ್ಮಗಂಟು ರೋಗವೊಂದು ಕಾಣಿಸಿಕೊಳ್ಳುವ ಮೂಲಕ ಗೋಪಾಲಕರಲ್ಲಿ ಆತಂಕ ಉಂಟು ಮಾಡಿದೆ. ವೈರಸ್ನಿಂದ ಒಂದು ಹಸುವಿನಿಂದ ಮತ್ತೊಂದು ಹಸುವಿಗೆ ಬೇಗನೇ ಹರಡುವ ಈ ಚರ್ಮಗಂಟು ರೋಗ ಬಂದೊಡನೆ ಹಸುಗಳಲ್ಲಿ ಹಾಲು ಉತ್ಪಾದನೆ ಕಡಿಮೆಯಾಗುತ್ತದೆ. ಜೊತೆಗೆ ಆಹಾರ ತಿನ್ನೋದನ್ನು ಬಿಟ್ಟು ಏಕಾಏಕಿ ಹಸುಗಳು ಬಡಕಲಾಗುತ್ತಿವೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸದಿದ್ದರೆ ರೋಗ ಉಲ್ಪಣವಾಗಿ ಸಾವನ್ನಪ್ಪುತ್ತಿವೆ.
ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಸುಮಾರು 15 ಕ್ಕೂ ಹೆಚ್ಚು ಹಸುಗಳು ಈ ಗಂಟು ರೋಗದಿಂದ ಸಾವನ್ನಪ್ಪಿವೆ ಎಂದು ರೈತರು ಹೇಳಿದ್ದಾರೆ. ಬೂದಿಕೋಟೆ ಹೋಬಳಿಯ ಪಚ್ಚಾರ್ಲಹಳ್ಳಿ, ಬೀಮಗಾನಹಳ್ಳಿ, ಕಾರಮಾನ ಹಳ್ಳಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ರೋಗ ಉಲ್ಬಣವಾಗಿದ್ದು, ಈ ಭಾಗದಲ್ಲಿ ಪಶುವೈದ್ಯರಿಲ್ಲದೇ ಹಸುಗಳಿಗೆ ಚಿಕಿತ್ಸೆ ಕೊಡಿಸಲಾಗದೇ ಲಕ್ಷಾಂತರ ರೂ ಬಂಡವಾಳ ಹಾಕಿ ತಂದಿದ್ದ ಹಸುಗಳು ಸಾವನ್ನಪ್ಪುತ್ತಿವೆ ಎಂದು ರೈತರು ಕಣ್ಣೀರಾಕಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಸರಿಸುಮಾರು 1,86,285 ಹಸುಗಳು ಸೇರಿದಂತೆ, 2,15,533 ಜಾನುವಾರುಗಳಿವೆ.
ಈ ಚರ್ಮ ಗಂಟುರೋಗದ ವೈರಸ್ ಒಂದು ಹಸುವಿನಿಂದ ಮತ್ತೊಂದು ಹಸುವಿಗೆ ಬೇಗನೆ ಹರಡುತ್ತದೆ. ಜೊತೆಗೆ ಸೊಳ್ಳೆ ಅಥವಾ ಇತರೆ ಕ್ರಿಮಿಗಳಿಂದ ಒಂದು ಹಸುವಿನಿಂದ ಮತ್ತೊಂದು ಹಸುವಿಗೆ ಹರಡುತ್ತಿದೆ. ಹೆಚ್ಚಾಗಿ ಜಿಲ್ಲೆಯ ಗಡಿ ಗ್ರಾಮದ ಶ್ರೀನಿವಾಸಪುರ, ಕೆಜಿಎಫ್, ಬಂಗಾರಪೇಟೆ ತಾಲೂಕುಗಳಲ್ಲಿ ಕಂಡು ಬಂದಿದೆ. ಜಿಲ್ಲೆಯಲ್ಲಿ ಒಟ್ಟು ಈ ವರೆಗೆ 969 ಕ್ಕೂ ಹೆಚ್ಚು ಹಸುಗಳಲ್ಲಿ ಈ ರೋಗ ಕಂಡು ಬಂದಿದ್ದು, ಸುಮಾರು 592 ಹಸುಗಳಲ್ಲಿ ಗುಣಮುಖವಾಗಿವೆ. ಇನ್ನು 500ಕ್ಕೂ ಹೆಚ್ಚು ಹಸುಗಳು ಗಂಟುರೋಗದಿಂದ ಬಳಲುತ್ತಿವೆ ಎಂದು ಪಶುಸಂಗೋಪನಾ ಇಲಾಖೆ ತಿಳಿಸಿದೆ.
ಆದರೇ ರೋಗ ನಿಯಂತ್ರಣಕ್ಕೆ 1,22,000 ಸಾವಿರ ಲಸಿಕೆ ತಂದಿದ್ದು, 244 ಹಳ್ಳಿಗಳಲ್ಲಿ ಹಸುಗಳಿಗೆ ಲಸಿಕೆ ಹಾಕಲಾಗಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವ ಮೂಲಕ ರೋಗ ನಿಯಂತ್ರಣಕ್ಕೆ ತರಲು ಪ್ರಯತ್ನ ನಡೆಸಲಾಗುತ್ತಿದೆ. ಈವರೆಗೆ ಕೇವಲ ನಾಲ್ಕು ಹಸುಗಳು ಸಾವನ್ನಪ್ಪಿವೆ ಜೊತೆಗೆ ರೋಗ ಕಂಡು ಬಂದ ಗ್ರಾಮದ ಸುತ್ತ ಮುತ್ತಲ 5 ಕಿಲೋಮೀಟರ್ ವ್ಯಾಪ್ತಿಯ ಹಸುಗಳಿಗೆ ಹಾಗೂ ಜಾನುವಾರುಗಳಿಗೆ ಲಸಿಕೆ ಹಾಕುವ ಕೆಲಸವೂ ಆರಂಭವಾಗಿದೆ ಎಂದು ಇಲಾಖೆ ತಿಳಿಸಿದೆ.
ಇದನ್ನೂ ಓದಿ: Lumpy skin disease: ಪಂಜಾಬ್ನಲ್ಲಿ ನೂರಾರು ಹಸುಗಳ ದುರ್ಮರಣ