ಕೋಲಾರ: ಪ್ರತಿಷ್ಠಿತ ವಿಸ್ಟ್ರಾನ್ ಕಂಪನಿಯ ಮೇಲೆ ನಡೆದ ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ಇದುವರೆಗೆ 149 ಕಾರ್ಮಿಕರನ್ನ ಬಂಧಿಸಿರುವುದಾಗಿ ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 454 ಹೆಚ್ಡಿ ಕ್ವಾಲಿಟಿ ಇರುವಂತಹ ಸಿಸಿಟಿವಿ ಕ್ಯಾಮರಾ ಹಾಗೂ ವಾಟ್ಸ್ಪ್ ಸಂಭಾಷಣೆಯನ್ನ ಆಧರಿಸಿ ಕೃತ್ಯವೆಸಗಿದವರನ್ನ ಬಂಧಿಸಲಾಗಿದೆ. 25 ಹೆಚ್ಚುವರಿ ಕಾರ್ಮಿಕರನ್ನ ವಿಚಾರಣೆ ಮಾಡುತ್ತಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನ ಬಂಧಿಸುವ ಸಾಧ್ಯತೆಯಿದೆ ಎಂದರು. 149 ಜನ ಬಂಧಿತರಲ್ಲಿ ಎಲ್ಲರೂ ಯುವಕರೇ ಆಗಿದ್ದು, ಬಂಧಿತರೆಲ್ಲರೂ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಬಂಧಿತರಲ್ಲಿ ಅಮಾಯಕರು ಯಾರೂ ಇಲ್ಲ. ವಿಡಿಯೋ ಅಧರಿಸಿ ಮೂವರು ಕಾರ್ಮಿಕರನ್ನ ಬಿಡುಗಡೆಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಓದಿ: ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರ ದಾಂದಲೆ: ಅಮಾಯಕರನ್ನು ಬಂಧಿಸದಂತೆ ಮನವಿ
ಕೃತ್ಯದಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರ ಮಾಹಿತಿ ಕಂಪನಿ ಸಿಬ್ಬಂದಿಯಿಂದ ಸಿಕ್ಕಿದ್ದು, 10 ಪೊಲೀಸ್ ತಂಡಗಳಿಂದ ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೇ ಕಳ್ಳತನವಾಗಿದ್ದ ಲ್ಯಾಪ್ ಟಾಪ್ ಹಾಗೂ ಮೊಬೈಲ್ಗಳನ್ನ ರಿಕವರಿ ಮಾಡಲಾಗುತ್ತಿದ್ದು, ಇದುವರೆಗೂ ಎಷ್ಟು ನಷ್ಟವಾಗಿದೆ ಎಂದು ಅಂದಾಜಿಸಿಲ್ಲ ಎಂದು ಎಸ್ಪಿ ಕಾರ್ತಿಕ್ ರೆಡ್ಡಿ ವಿವರಿಸಿದರು.