ಕೊಡಗು: ಕಾಡಾನೆಗಳ ಹಾವಾಳಿ ಕೊಡಗಿನಲ್ಲಿ ಎಲ್ಲೆ ಮೀರುತ್ತಿದೆ. ಇಂದು ಮುಂಜಾನೆ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿ ಮೇಲೆ ಕಾಡಾನೆ ದಾಳಿ ನಡೆಸಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಯನ್ನ ಆಸ್ಪತ್ರೆಗೆ ಸೇರಿಸಲಾಗಿದೆ. ಇತ್ತಿಚಿಗೆ ದಿನಕಳೆದಂತೆ ಮಂಜಿನ ನಗರಿಯಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿದೆ. ಕಾಡಾನೆಗಳು ಕಾಡು ಬಿಟ್ಟು ನಾಡಿನಲ್ಲೇ ವಾಸ್ತವ್ಯ ಹೂಡುತ್ತಿದ್ದು, ಹಗಲಲ್ಲೇ ಜನರ ಮೇಲೆರಗುತ್ತಿವೆ.
ಕಾಡು ತೊರೆದು ಕಾಫಿ ತೋಟಗಳಲ್ಲೇ ವಾಸ್ತವ್ಯ ಹೂಡುತ್ತಿರುವ ಮದಗಜಗಳು ಜನವಸತಿ ಪ್ರದೇಶಗಳಲ್ಲಿ ಸುತ್ತಾಡುತ್ತಾ, ಜನರ ಮೇಲೆ ದಾಳಿ ಮಾಡುವುದು ಮಾಮೂಲಾಗಿದೆ. ಇಂದು ಬೆಳಗ್ಗೆ ತನ್ನ ತಂಗಿಯರೊಂದಿಗೆ ತೋಟದ ದಾರಿಯಲ್ಲಿ ಶಾಲೆಗೆ ತೆರಳುತ್ತಿದ್ದ ಅಣ್ಣ ಚಂದನ್ ಎಂಬ ವಿದ್ಯಾರ್ಥಿ ಮೇಲೆ ಕಾಡಾನೆ ದಾಳಿ ನಡೆಸಿದೆ. ಪರಿಣಾಮ ವಿದ್ಯಾರ್ಥಿ ಚಂದನ್ ತಲೆ ಹಾಗೂ ಹೊಟ್ಟೆ ಭಾಗಕ್ಕೆ ತೀವ್ರ ಪೆಟ್ಟಾಗಿದೆ. ಗಂಭೀರ ಗಾಯಗೊಂಡ ವಿದ್ಯಾರ್ಥಿಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ತೋಟಗಳಲ್ಲಿ ಕೆಲಸ ಮಾಡುವುದೇ ಕಷ್ಟವಾಗಿದೆ. ಅರಣ್ಯ ಇಲಾಖೆಗೆ ಎಷ್ಟೇ ಬಾರಿ ಮನವಿ ಮಾಡಿದರು ಪ್ರಯೋಜನವಾಗುತ್ತಿಲ್ಲ. ಮನವಿ ಪತ್ರಗಳ ಕಡತದ ಗಾತ್ರ ಬೆಳೆಯುತ್ತದೆಯೇ ಹೊರತು ಆನೆ ಹಾವಳಿ ನಿಯಂತ್ರಿಸುವ ಕೆಲಸಗಳು ಆಗುತ್ತಿಲ್ಲ. ಹಾಗಾಗಿ ಭಯದಲ್ಲೇ ಬದುಕು ಸಾಗಿಸುವಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ತಮ್ಮ ಅಳಲನ್ನ ತೊಡಿಕೊಂಡಿದ್ದಾರೆ.
ಇನ್ನು, ಸ್ಥಳೀಯ ಮಕ್ಕಳಿಗೆ ಶಾಲೆಗೆ ತೆರಳಲು ಆನೆಗಳ ಭಯ ಇರುವುದರಿಂದ ಅರಣ್ಯ ಇಲಾಖೆ ಜಿಲ್ಲೆಯ 2 ಪ್ರದೇಶಗಳಲ್ಲಿ ಮಕ್ಕಳಿಗೆ ಎಸ್ಕಾಟ್ ನೀಡುತ್ತಿದೆ. ಮನೆಯಿಂದ ಶಾಲೆಗೆ ಶಾಲೆಯಿಂದ ಮನೆಗೆ ಮಕ್ಕಳನ್ನು ತಮ್ಮ ಜೀಪಿನಲ್ಲಿ ಕರೆದುಕೊಂಡು ಹೋಗಿ ವಾಪಾಸ್ ಜೀಪಿನಲ್ಲೇ ಕರೆದುಕೊಂಡು ಬರುವ ಕಾರ್ಯವನ್ನು ಸಿಬ್ಬಂದಿ ಮಾಡುತ್ತಿದ್ದಾರೆ.