ಕೊಡಗು : ಆರಂಭದಲ್ಲಿ ಒಂದು ಕೊರೊನಾ ಪ್ರಕರಣ ಪತ್ತೆಯಾಗಿದ್ದನ್ನು ಬಿಟ್ಟರೆ ಆ ಬಳಿಕ ಪ್ರಕರಣಗಳೇ ಇಲ್ಲದ ನಾಡಲ್ಲಿ ಈಗ 209 ಸೋಂಕಿತರಿದ್ದಾರೆ. ಕೋವಿಡ್ ಆತಂಕ ಹೆಚ್ಚುತ್ತಿರುವ ಪಟ್ಟಣಗಳಲ್ಲಿ ಈಗಾಗಲೇ ವರ್ತಕರೇ ಸ್ವಯಂ ಘೋಷಿತ ಲಾಕ್ ಡೌನ್ ಮಾಡಿಕೊಂಡಿದ್ದಾರೆ.
ಲಾಕ್‌ಡೌನ್ ಎಲ್ಲೆಲ್ಲಿ?
ಸುಂಟಿಕೊಪ್ಪ ಪಟ್ಟಣವನ್ನು ಮುಂದಿನ ಸೋಮವಾರದವರೆಗೆ ಬಂದ್ ಮಾಡಲಾಗಿದೆ. ಇಲ್ಲಿನ ಚೇಂಬರ್ ಆಫ್ ಕಾಮರ್ಸ್, ಇಂದಿನಿಂದ ಎಲ್ಲಾ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಮಾಡಲು ತೀರ್ಮಾನಿಸಿದೆ. ಕುಶಾಲನಗರದಲ್ಲೂ ಕೂಡ ವಾರದಲ್ಲಿ ಮೂರು ದಿನ ಸಂಪೂರ್ಣ ಲಾಕ್ ಡೌನ್ ಮಾಡಲು ಅಲ್ಲಿನ ವ್ಯಾಪಾರಿಗಳ ಒಕ್ಕೂಟ ನಿರ್ಧರಿಸಿದೆ.
ಜಿಲ್ಲಾಡಳಿತ ಕೂಡ ವಾರದ ಕೊನೆಯಲ್ಲಿ ಎರಡು ದಿನ ಲಾಕ್ ಡೌನ್ ಮಾಡಲು ನಿರ್ಧರಿಸಿದೆ. ಹೀಗಾಗಿ ಕುಶಾಲನಗರದಲ್ಲೂ ವಾರದಲ್ಲಿ ಐದು ದಿನ ಯಾವುದೇ ವ್ಯಾಪಾರ ವಹಿವಾಟು ನಡೆಯುವುದಿಲ್ಲ. ಇದೆಲ್ಲವೂ ವರ್ತಕರೇ ಸ್ವತಃ ತೆಗೆದುಕೊಂಡಿರುವ ನಿರ್ಧಾರಗಳು.
ಜನ ಹೇಳುವುದೇನು?
ಮತ್ತೊಂದೆಡೆ, ಜಿಲ್ಲೆಯನ್ನು ಮತ್ತೆ ಲಾಕ್‌ಡೌನ್ ಮಾಡಬೇಕು. ಇಲ್ಲವೇ ಜಿಲ್ಲಾ ಗಡಿಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ, ಹೊರ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ಬರುತ್ತಿರುವವರಿಗೆ ಸೀಲ್ ಹಾಕಿ ಕ್ವಾರಂಟೈನ್ ಮಾಡಬೇಕು ಅನ್ನೋದು ಸ್ಥಳೀಯರ ಸಲಹೆ.