ವಿರಾಜಪೇಟೆ/ಕೊಡಗು: ಮಾನಸಿಕ ಖಿನ್ನತೆಗೆ ಒಳಗಾಗಿ ವೃದ್ಧೆಯೋರ್ವಳು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೈ ಸೊಡ್ಲುರು ಗ್ರಾಮದಲ್ಲಿ ನಡೆದಿದೆ.
ಹುದಿಕೇರಿ ಪಂಚಾಯಿತಿ ವ್ಯಾಪ್ತಿಯ ಹೈ ಸೊಡ್ಲೂರಿನ ನಿವಾಸಿ ತಾರ (71) ಆತ್ಮಹತ್ಯೆಗೆ ಶರಣಾದ ವೃದ್ಧೆ. ಬೆಳಿಗ್ಗೆ ಮನೆಯಲ್ಲಿ ನಾಡ ಬಂದೂಕಿನಿಂದ ಕುತ್ತಿಗೆ ಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೃದ್ಧೆಯ ಪುತ್ರ ಹಾಗೂ ಸೊಸೆ ಬೇರೆ ಮನೆಯಲ್ಲಿ ವಾಸಿಸುತ್ತಿದ್ದರು. ಹೀಗಾಗಿ ಹಲವು ವರ್ಷಗಳಿಂದ ಏಕಾಂಗಿಯಾಗಿದ್ದ ಇವರು, ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಮೃತದೇಹವನ್ನು ವಿರಾಜಪೇಟೆಯ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನಾ ಸ್ಥಳಕ್ಕೆ ಶ್ರೀಮಂಗಲ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.