ಕೊಡಗು: ಸಿದ್ದರಾಮಯ್ಯನವರು ಜಿಲ್ಲೆಯ ಕೊಡ್ಲಿಪೇಟೆಯಲ್ಲಿ ಮಳೆಗಾಲದ ವಿಶೇಷ ಆಹಾರ ಕಳಲೆ ಮತ್ತು ಅಕ್ಕಿರೊಟ್ಟಿ ತಿಂದಿದ್ದಾರೆ. ಜೊತೆಗೆ ಅನ್ನ, ತರಕಾರಿ ಸಾಂಬಾರು ಸೇವಿಸಿದ್ದಾರೆ. ಸ್ವತಃ ನಾನೇ ಅವರಿಗೆ ಊಟ ಬಡಿಸಿದ್ದೇನೆ, ಮಾಂಸಾಹಾರ ತಿಂದು ಅವರು ದೇವಸ್ಥಾನಕ್ಕೆ ಹೋಗಿಲ್ಲ ಎಂದು ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಹೇಳಿದ್ದಾರೆ.
ಕೊಡಗಿನ ಮುಕ್ಕೋಡ್ಲಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಕೊಡಗಿಗೆ ಭೇಟಿ ನೀಡಿದ್ದ ವೇಳೆ ಸಿದ್ದರಾಮಯ್ಯನವರು ಮಾಂಸದ ಆಹಾರ ಸೇವಿಸಿದ ಬಳಿಕ ಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದರು. ಇದೇ ವೇಳೆ ಸಂಪತ್ ಕಾಂಗ್ರೆಸ್ ಕಾರ್ಯಕರ್ತ ಹೇಳಿಕೆ ವಿಚಾರವಾಗಿ, ಆತ ಯಾಕೆ ಕಾಂಗ್ರೆಸ್ನ ಯಾವುದೇ ಸಭೆ ಸಮಾರಂಭಗಳಿಗೆ ಬಂದಿಲ್ಲ. ಕಾರ್ಯಕರ್ತನೇ ಆಗಿದ್ದರೆ ನಮ್ಮೊಂದಿಗೆ ಬಂದು ಬಿಜೆಪಿಯವರಿಗೆ ಮೊಟ್ಟೆ ಹೊಡೆಯಬಹುದಿತ್ತು. ಆದರೆ ಆತ ಯಾಕೆ ಹಾಗೆ ಮಾಡಿಲ್ಲ? ಹಾಗಾದ್ರೆ ಬಿಜೆಪಿಯವರ ಜೊತೆ ನಿಂತು ಯಾಕೆ ಮೊಟ್ಟೆ ಹೊಡೆಯಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.
ಸಂಪತ್ ಶಾಸಕ ಅಪ್ಪಚ್ಚುರಂಜನ್ ಅವರ ಪಕ್ಕಾ ಶಿಷ್ಯ ಅಂತ ಗೊತ್ತಿದೆ. ಎಲ್ಲೋ ನಿಂತು ಕಾಂಗ್ರೆಸ್ ಶಲ್ಯ ಹಾಕಿಕೊಂಡ ಮಾತ್ರಕ್ಕೆ ಆತ ಕಾಂಗ್ರೆಸ್ ಕಾರ್ಯಕರ್ತನೆ? ಇದೊಂದು ಹಾಸ್ಯಾಸ್ಪದ ವಿಚಾರ ಎಂದ ವೀಣಾ ಅಚ್ಚಯ್ಯ, ಖಂಡಿತವಾಗಿಯೂ ಸಂಪತ್ ಕಾಂಗ್ರೆಸ್ಸಿಗನಲ್ಲ. ಸಿದ್ದರಾಮಯ್ಯರ ಬಗ್ಗೆ ನೋವಿದ್ದರೆ ಆತ ನಮಗೆ ಹೇಳುತ್ತಿದ್ದ. ಕೊಡಗಿನ ಶಾಸಕರು ಯಾಕೆ ಆತನನ್ನು ಹೋಗಿ ಪೊಲೀಸ್ ಠಾಣೆಯಿಂದ ಬಿಡಿಸಿಕೊಂಡು ಬರುತ್ತಾರೆ? ಕಾವೇರಿ ಮಾತೆಯ ನಾಡಿನಲ್ಲಿ ಅವರಿಬ್ಬರು ಹೇಳುವ ಸುಳ್ಳು ನೋಡಿದರೆ, ಮುಂದಕ್ಕೆ ಅವರೇನು ಆಗ್ತಾರೆ ಎಂದು ಹೇಳಲು ನಾಚಿಕೆಯಾಗುತ್ತಿದೆ ಎಂದರು.
ಇದನ್ನೂ ಓದಿ: ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪೇನು : ಸಿದ್ದರಾಮಯ್ಯ ಪ್ರಶ್ನೆ