ಕೊಡಗು: ಜಿಲ್ಲೆಯಲ್ಲಿ ಕೊರೊನಾಗೆ ಮತ್ತಿಬ್ಬರು ಬಲಿಯಾಗಿದ್ದು, ಮೃತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಮಡಿಕೇರಿಯ ಆಜಾದ್ ನಗರದ 54 ವರ್ಷದ ಮಹಿಳೆಯೊಬ್ಬರಿಗೆ ಕಳೆದ ನಾಲ್ಕು ದಿನಗಳಿಂದ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಅವರು ಕೋವಿಡ್ ಟೆಸ್ಟ್ಗೆ ಒಳಗಾಗುವ ಬದಲು ಖಾಸಗಿ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆದು ಸುಮ್ಮನಾಗಿದ್ದರು. ಬುಧವಾರ ರಾತ್ರಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ಮಹಿಳೆಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ತಕ್ಷಣವೇ ಮಹಿಳೆಯನ್ನು ಐಸಿಯು ವಾರ್ಡ್ಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗಿದೆ. ಜೊತೆಗೆ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಕೂಡ ಮಾಡಲಾಗಿದ್ದು, ಮಹಿಳೆಗೆ ಕೊರೊನಾ ದೃಢಪಟ್ಟಿದೆ. ಬಳಿಕ ಸ್ವಲ್ಪ ಹೊತ್ತಿನಲ್ಲೇ ಮಹಿಳೆ ಮೃತಪಟ್ಟಿದ್ದಾರೆ.
ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದ ಆರೋಗ್ಯ ಕೇಂದ್ರದ 45 ವರ್ಷದ ಆರೋಗ್ಯ ಕಾರ್ಯಕರ್ತ ಕೋವಿಡ್ನಿಂದ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಮಧುಮೇಹ ಸೇರಿದಂತೆ ಇನ್ನಿತರೆ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಆರೋಗ್ಯ ಕಾರ್ಯಕರ್ತನಿಗೆ ತೀವ್ರ ಅನಾರೋಗ್ಯ ಕಾಡಿತ್ತು. ಮೊದಲಿಗೆ ಕೋವಿಡ್ ಟೆಸ್ಟ್ ನಡೆಸಿದಾಗ ವ್ಯಕ್ತಿಗೆ ನೆಗೆಟಿವ್ ಬಂದಿತ್ತು. ಹೀಗಾಗಿ ಇತರೆ ಆರೋಗ್ಯ ಸಮಸ್ಯೆ ಎಂದು ಪರಿಗಣಿಸಿ, ಮಡಿಕೇರಿ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಆತ ಮತ್ತಷ್ಟು ಅನಾರೋಗ್ಯಕ್ಕೆ ತುತ್ತಾದಾಗ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಜಿಲ್ಲಾಡಳಿತ ಬುಧವಾರ ರಾತ್ರಿಯೇ ಆರೋಗ್ಯ ಕಾರ್ಯಕರ್ತನ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದೆ. ಇತರೆ ಕಾಯಿಲೆಯಿಂದ ಮೃತಪಟ್ಟಿದ್ದಾನೆ ಎಂದು ಸಂಬಂಧಿಕರು ಶವ ಸಂಸ್ಕಾರ ಮಾಡಿ ಮುಗಿಸಿದ್ದಾರೆ. ಆದರೆ, ಇಂದು ಬಂದ ವರದಿಯಲ್ಲಿ ಮೃತ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ವರದಿ ಬರುವುದಕ್ಕೂ ಮುನ್ನ ಆರೋಗ್ಯ ಇಲಾಖೆ ವ್ಯಕ್ತಿಯ ಶವವನ್ನು ಕುಟುಂಬದವರಿಗೆ ನೀಡಿ ಎಡವಟ್ಟು ಮಾಡಿದೆ. ಜಿಲ್ಲೆಯಲ್ಲಿಂದು 25 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.