ಕೊಡಗು: ವಿರಾಜಪೇಟೆಯ ಮಾನಸಿಕ ಅಸ್ವಸ್ಥ ವ್ಯಕ್ತಿಯ ಸಾವು ಪ್ರಕರಣಕ್ಕೀಗ ಟ್ವಿಸ್ಟ್ ಸಿಕ್ಕಿದೆ. ಪೊಲೀಸರಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದಾನೆ ಎನ್ನಲಾದ ವ್ಯಕ್ತಿಯು ನಡುರಾತ್ರಿಯಲ್ಲಿ ಮಚ್ಚು ಹಿಡಿದು ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡುತ್ತಾ ರಂಪಾಟ ಮಾಡುತ್ತಿರುವ ವಿಡಿಯೋ ಮತ್ತು ಸಿಸಿ ಕ್ಯಾಮರಾಗಳ ವಿಡಿಯೋ ಲಭ್ಯವಾಗಿದೆ.
ರಸ್ತೆಯಲ್ಲಿ ಸಿಕ್ಕವರ ಮೇಲೆ ಹಲ್ಲೆ ನಡೆಸಿದ್ದ ಮಾನಸಿಕ ಅಸ್ವಸ್ಥ ನೈಟ್ ಬೀಟ್ ಮಾಡುತ್ತಿದ್ದ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾನೆ. ಜನರ ಮೇಲಿನ ದಾಳಿ ತಡೆಯುವ ಸಲುವಾಗಿ ಅಸ್ವಸ್ಥನನ್ನು ಬಂಧಿಸಲು ತೆರಳಿದ್ದಾಗಲೂ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಈ ವೇಳೆ ಜನರು, ಪೊಲೀಸರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಮಾನಸಿಕ ಅಸ್ವಸ್ಥನಿಂದ ಅಮಾಯಕರ ಮೇಲಾದ ಮಚ್ಚಿನ ದಾಳಿ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಆ ವಿಡಿಯೋಗಳು ಲಭ್ಯವಾಗಿದೆ. ಪೊಲೀಸರು ಪ್ರಾಣ ಉಳಿಸಿಕೊಳ್ಳಲು, ಜನರ ಪ್ರಾಣ ಉಳಿಸಲು ಆತನನ್ನು ಬಂಧಿಸಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ರಾಯ್ ಡಿಸೋಜಾ ಸಾವು ಪ್ರಕರಣ: 8 ಪೊಲೀಸರನ್ನು ಅಮಾನತುಗೊಳಿಸಿ ಐಜಿಪಿ ಆದೇಶ
ಈ ಘಟನೆಯಲ್ಲಿ ಪೊಲೀಸರ ಹಲ್ಲೆಯಿಂದ ರಾಯ್ ಡಿಸೋಜಾ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಈ ಸಂಬಂಧ ರಾಯ್ ಡಿಸೋಜಾ ಅವರ ಸಹೋದರ ದೂರು ಕೂಡ ಸಲ್ಲಿಸಿದ್ದರು. ಸಾವಿನ ಪ್ರಕರಣ ಸಂಬಂಧ ದಕ್ಷಿಣ ವಲಯ ಐಜಿಪಿ ಪ್ರವೀಣ್ ಪವಾರ್ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಮೇಲ್ನೋಟಕ್ಕೆ ತಪ್ಪಿತಸ್ಥರೆಂದು ಕಂಡು ಬಂದ ಎಂಟು ಪೊಲೀಸರನ್ನು ಸ್ಥಳದಲ್ಲೇ ಅಮಾನತು ಮಾಡಿದ್ದರು. ಇದೀಗ ಈ ಬಗ್ಗೆ ತನಿಖೆ ನಡೆಯುತ್ತಿದೆ.