ಕೊಡಗು: ಚೀನಾ, ಅಮೆರಿಕ ಸೇರಿದಂತೆ ಅನೇಕ ದೇಶಗಳಲ್ಲಿ ಕೋವಿಡ್ ವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು, ದೇಶದಲ್ಲೂ ಆತಂಕ ಎದುರಾಗಿದೆ. ಈಗಾಗಲೇ ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೊಡಗು ಜಿಲ್ಲೆಯ ಮೇಲೆ ಕೊರೊನಾ ಪರಿಣಾಮ ಬೀರುವ ಆತಂಕ ಶುರುವಾಗಿದೆ. ಇದಕ್ಕೆ ಕಾರಣ ಇಯರ್ ಎಂಡ್ ಆಗಿರೋದ್ರಿಂದ ಜಿಲ್ಲೆಯತ್ತ ಸಾಕಷ್ಟು ಪ್ರವಾಸಿಗರು ಮುಖ ಮಾಡುತ್ತಿದ್ದಾರೆ. ಕೋವಿಡ್ ಸಂಬಂಧ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದರೂ ಸಹ ಆದರೂ ಸ್ಥಳೀಯರಲ್ಲಿ ಭಯ ಶುರುವಾಗಿದೆ.
ಹೋಟೆಲ್, ರೆಸಾರ್ಟ್ ಉದ್ಯಮಿಗಳಿಗೆ ಆತಂಕ.. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದು ಕೊಡಗಿನ ಪ್ರವಾಸೋದ್ಯಮಿಗಳ ಆತಂಕಕ್ಕೆ ಕಾರಣವಾಗಿದೆ. ಇಯರ್ ಎಂಡ್ ಸಂಭ್ರಮಾಚರಣೆಗೆ ಸಂಪೂರ್ಣ ಬುಕ್ ಆದ ಹೋಂ ಸ್ಟೇ, ರೆಸಾರ್ಟ್, ಪ್ರವಾಸಿ ಸ್ಥಳಗಳು, ಹೋಟೆಲ್ಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಕಳೆದ ಮೂರು, ನಾಲ್ಕು ವರ್ಷದಿಂದ ಜಲ ಪ್ರಳಯ ಹಾಗೂ ಕೋವಿಡ್ನಿಂದ ಬಳಲಿ ಬೆಂಡಾಗಿ ಹೋಗಿದ್ದ ಪ್ರವಾಸೋದ್ಯಮ ಅವಲಂಬಿತರಿಗೆ ಕೋವಿಡ್ 19 ವೈರಸ್ ಮತ್ತೆ ನಡುಕ ಹುಟ್ಟಿಸಿದೆ.
ವೀಕೆಂಡ್ ಹಾಗೂ ಇಯರ್ ಎಂಡಿಂಗ್ನಲ್ಲಿ ಮಾತ್ರ ಕೊಡಗಿನಲ್ಲಿ ಪ್ರವಾಸೋದ್ಯಮ ಚೇತರಿಕೆ ಕಾಣುತ್ತದೆ. ಈ ಬಾರಿ ಕೂಡ ಕೊಡಗಿನ ಬಹುತೇಕ ಎಲ್ಲಾ ಹೋಂ ಸ್ಟೇ ಹಾಗೂ ರೆಸಾರ್ಟ್ಗಳು ಭರ್ತಿಯಾಗಿದ್ದು, ಮುಂಗಡ ಬುಕ್ಕಿಂಗ್ ಕೂಡ ಮಾಡಲಾಗಿದೆ. ಇನ್ನೊಂದೆಡೆ, ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದ್ದು, ಪ್ರವಾಸೋದ್ಯವನ್ನೇ ನಂಬಿ ಬದುಕುವವರಿಗೆ ಭಾರಿ ದೊಡ್ಡ ಹೊಡೆತ ಬೀಳಲಿದ್ದು, ಏನಾಗುತ್ತೋ ಎನ್ನುವ ಆತಂಕ ಅವರನ್ನು ಕಾಡುತ್ತಿದೆ.
ಇದನ್ನೂ ಓದಿ: ಕೋವಿಡ್ ಬಿಎಫ್-7 ಉಪತಳಿ ನಿಯಂತ್ರಣಕ್ಕೆ ಸರ್ಕಾರ ಸರ್ವ ಸನ್ನದ್ದ: ಸಚಿವ ಸುಧಾಕರ್
ಕೋವಿಡ್ ನಿಯಮ ಉಲ್ಲಂಘಿಸುತ್ತಿರುವ ಜನ : ರಾಜ್ಯದಲ್ಲಿ ಕೋವಿಡ್ ಅಧಿಕವಾಗದಂತೆ ತಡೆಯಲು ಸರ್ಕಾರ ಕೆಲ ನಿಯಮಗಳನ್ನು ಜಾರಿ ಮಾಡಿದೆ. ಆದ್ರೆ, ವರ್ಷದ ಕೊನೆಯ ದಿನಗಳನ್ನು ಎಂಜಾಯ್ ಮಾಡಲು ಕೊಡಗಿಗೆ ಬರುತ್ತಿರುವ ಪ್ರವಾಸಿಗರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ಮಾಸ್ಕ್ ಹಾಕದೇ ಎಂದಿನಂತೆ ಸಂಚಾರ ಮಾಡುತ್ತಿದ್ದಾರೆ. ಹೀಗಾಗಿ, ಸ್ಥಳೀಯರಲ್ಲಿ ಸಹ ಆತಂಕ ಶುರುವಾಗಿದೆ.
ಇದನ್ನೂ ಓದಿ: ಕೋವಿಡ್ ರೂಪಾಂತರಿ ತಳಿಯ ಬಗ್ಗೆ ಸರ್ಕಾರ ಎಚ್ಚರವಹಿಸಿದೆ: ಸಚಿವ ಸುಧಾಕರ್
ಇನ್ನು, ಕೊಡಗು ಜಿಲ್ಲೆ ನೆರೆಯ ಕೇರಳ ರಾಜ್ಯದೊಂದಿಗೆ ಮೂರು ಗಡಿಭಾಗವನ್ನ ಹಂಚಿಕೊಂಡಿದ್ದು, ಇಲ್ಲಿಯೂ ಕೂಡ ಜಿಲ್ಲಾಡಳಿತ ಎಚ್ಚರ ವಹಿಸಿದೆ. ಜೊತೆಗೆ ವಿದೇಶಿ ಪ್ರವಾಸಿಗರ ಮೇಲೆ ಸಹ ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿದೆ. ಸರ್ಕಾರ ಯಾವ ರೀತಿ ಮಾರ್ಗಸೂಚಿಗಳನ್ನು ಹೊರಡಿಸುತ್ತೋ ಅದನ್ನು ಜಿಲ್ಲೆಯಲ್ಲಿ ಚಾಚು ತಪ್ಪದೆ ಪಾಲಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಈಗಾಗಲೇ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ 400 ಬೆಡ್ಗಳ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲೆಯ ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಜೊತೆಗೆ 3ನೇ ಡೋಸ್ ವ್ಯಾಕ್ಸಿನೇಷನ್ ಜೊತೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸುವಂತೆ ಮನವಿ ಮಾಡಿದೆ.
ಇದನ್ನೂ ಓದಿ: ಕೋವಿಡ್ ಮಾರ್ಗಸೂಚಿಯನ್ನು ಸಚಿವರು ಶಾಸಕರು ಪಾಲಿಸುತ್ತಿದ್ದಾರಾ?.. ವಿಡಿಯೋ ನೋಡಿ