ಕೊಡಗು: ಜಿಲ್ಲೆಯಲ್ಲಿ ಧಾರ್ಮಿಕ ಕೇಂದ್ರಗಳು ಅತಿಯಾದ ಪ್ರವಾಸೋದ್ಯಮದಿಂದಾಗಿ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವುದು ಹೊಸತೇನಲ್ಲ. ಇದಕ್ಕೆ ಪೂರಕವಾಗಿ ಜಿಲ್ಲೆಯ ಗ್ರಾಮವೊಂದರ ಬೆಟ್ಟದ ತುತ್ತ ತುದಿಯಲ್ಲಿರೋ ಶಿವನ ಆಲಯವೊಂದು ಪ್ರವಾಸಿಗರ ಅತಿಯಾದ ಹಾವಳಿಯಿಂದಾಗಿ ಗಬ್ಬೆದ್ದು ಹೋಗಿದೆ. ಪ್ರವಾಸಿಗರನ್ನ ನಿಯಂತ್ರಿಸಬೇಕಾಗಿದ್ದ ಸ್ಥಳೀಯ ಪಂಚಾಯಿತಿ ಗಾಢ ನಿದ್ದೆಗೆ ಜಾರಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಕೋಟೆ ಬೆಟ್ಟ.. ಹೆಸರೇ ಹೇಳೊ ಹಾಗೆ ಸುತ್ತಲೂ ಏಳು ಸುತ್ತಿನ ಕೋಟೆಯಂತಿರೋ ಬೆಟ್ಟಗುಡ್ಡಗಳ ಸಾಲಿನ ಮಧ್ಯೆ ವಿರಾಜಮಾನವಾಗಿರೋ ಬೃಹತ್ ಬಂಡೆಯ ಬೆಟ್ಟ.. ಇದು ಕೇವಲ ನಿಸರ್ಗ ರಮಣೀಯ ಪ್ರದೇಶ ಮಾತ್ರವಲ್ಲ. ಶಿವನ ಗುಹಾ ದೇವಾಲಯವನ್ನೂ ಹೊಂದಿರೋ ಐತಿಹಾಸಿ ಸ್ಥಳವೂ ಹೌದು.. ಅದರಲ್ಲೂ ಈಗಂತೂ ಬೆಟ್ಟದ ತುಂಬಾ ನೀಲ ಕುರುಂಜಿ ಗಿಡಗಳು ಹೂವು ಅರಳಿಸಿ ನಸುನಗುತ್ತಾ ನಿಂತಿವೆ. ಇಂತಹ ಆಹ್ಲಾದಕರ ವಾತಾವರಣವನ್ನ ಎಂಜಾಯ್ ಮಾಡೋಕೆ ಅಂತಾನೇ ನಿತ್ಯ ಇಲ್ಲಿ ಸಾವಿರಾರು ಪ್ರವಾಸಿಗರು ದಾಂಗುಡಿ ಇಡ್ತಾ ಇದ್ದಾರೆ.
ಕೊರೊನಾ ನಿಯಮ ಇಲ್ಲಿ ಲೆಕ್ಕಕ್ಕೇ ಇಲ್ಲ
ಸೋವಾರಪೇಟೆ ತಾಲೂಕಿನ ಗರ್ವಾಲೆ ಗ್ರಾಮದಲ್ಲಿ ಈ ಕೋಟೆ ಬೆಟ್ಟವಿದೆ. ಲಾಕ್ ಡೌನ್ ಇದ್ರೂ ಇವರಿಗೆಲ್ಲಾ ಲೆಕ್ಕಕ್ಕೇ ಇಲ್ಲ. ಯಾಕಂದ್ರೆ ಇಲ್ಲಿ ಪ್ರವಾಸಿಗರಿಗೆ ಯಾವುದೇ ನಿಯಂತ್ರಣವಿಲ್ಲ. ಯಾರು ಬೇಕಾದ್ರೂ ಯಾವಾಗಬೇಕಾದ್ರೂ ಇಲ್ಲಿಗೆ ಬರಬಹುದು. ಸುಮ್ಮನೆ ಬಂದು ಹೋಗಿದ್ದರೆ ಪರವಾಗಿರಲಿಲ್ಲ. ಆದರೆ ಇವರು ಬಂದು ಕಂಡ ಕಂಡಲ್ಲಿ ಮಧ್ಯದ ಬಾಟಲ್ಗಳು.. ಕಸ ಎಸೆದಿದ್ದು ಶಿವನ ಸಾನಿಧ್ಯದ ಎದುರಲ್ಲೇ ಅಸಹ್ಯ ವಾತಾವರಣ ಸೃಷ್ಟಿಯಾಗಿದೆ.
ಪ್ರಶ್ನಿಸಿದರೆ ಹಲ್ಲೆ
ಪ್ರವಾಸಿಗರ ಅಸಭ್ಯ ವರ್ತನೆ ಬಗ್ಗೆ ಸ್ಥಳಿಯ ಗ್ರಾಮಸ್ಥರು ಪ್ರಶ್ನಿಸಿದಾಗ, ಸ್ಥಳೀಯರ ಮೇಲೆ ಪ್ರವಾಸಿಗರೇ ಹಲ್ಲೆ ಮಾಡಿದ್ಧೂ ಇದೆಯಂತೆ. ಪ್ರವಾಸಿಗರ ಅತಿರೇಕದ ವರ್ತನೆ ಬಗ್ಗೆ ಸ್ಥಳೀಯರು ತೀರಾ ರೋಸಿ ಹೋಗಿರೋದಾಗಿ ಹೇಳ್ತಾರೆ. ಪರಿಸ್ಥಿತಿ ಕೈ ಮೀರೋ ಮೊದಲೇ ಸ್ಥಳೀಯ ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಂಡು ಪ್ರವಾಸಿಗರನ್ನ ನಿಯಂತ್ರಿಸಿ ಅಂತ ಆಗ್ರಹಿಸಿದ್ದಾರೆ. ಈ ಬೆಟ್ಟ ಪ್ರದೇಶ ಅರಣ್ಯ ಇಲಾಖೆ ಸುಪರ್ದಿಗೆ ಬರುತ್ತದೆಯಾದ್ರೂ ಆ ಇಲಾಖೆ ಕೂಡ ತಲೆ ಕೆಡಿಸಿಕೊಂಡಿಲ್ಲವಂತೆ.
ಜಿಲ್ಲೆಯ ತಲಕಾವೇರಿ, ಭಾಗಮಂಡಲ, ಕಕ್ಕಬ್ಬೆ ಇಗ್ಗುತಪ್ಪ ದೇವಾಲಯ, ಇರ್ಪು ರಾಮೇಶ್ವರ ದೇವಾಲಯ ಸೇರಿದಂತೆ ಹಲವು ಪುಣ್ಯ ಕ್ಷೇತ್ರಗಳು ಇಂದು ಪ್ರವಾಸೋದ್ಯಮದಿಂದಾಗಿ ಗಬ್ಬೆದ್ದು ಹೋಗಿದೆ. ಇದೀಗ ಕೋಟೆ ಬೆಟ್ಟ ಕೂಡ ಇದೇ ಸಾಲಿಗೆ ಸೇರುತ್ತಿದ್ದು, ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕಿದೆ ಅಂತ ನಾಗರಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಆಸ್ಪತ್ರೆ ಕಟ್ಟಡದ ಮಾಲೀಕ-ಆಡಳಿತ ಮಂಡಳಿ ಗಲಾಟೆ.. ವೈದ್ಯರ ಮೇಲೆ ಹಲ್ಲೆ ಆರೋಪ