ಕೊಡಗು: ಸೊಸೆ ತನ್ನ ಮಗನಿಗೆ ಡೈವೋರ್ಸ್ ನೀಡಲು ಕೋರ್ಟ್ ಮೆಟ್ಟಿಲೇರಿದಳು ಎಂಬ ಕಾರಣಕ್ಕೆ ತಾಯಿ ಮತ್ತು ಮಗ ಇಬ್ಬರೂ ನೇಣಿಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದ ಆಲೆಕಟ್ಟೆಯಲ್ಲಿ ನಡೆದಿದೆ.
ಹರೀಶ್ (26), ತಾಯಿ ತಂಗಮಣಿ (55) ನೇಣಿಗೆ ಶರಣಾದವರು. ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಹರೀಶ್ ಮೊದಲಿನಿಂದಲೂ ಕುಡಿತದ ಚಟಕ್ಕೆ ಬಿದ್ದಿದ್ದ ಎನ್ನಲಾಗಿದೆ. ಹೀಗಾಗಿ ಹರೀಶ್ ಪತ್ನಿ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಇದರಿಂದ ತೀವ್ರ ನೊಂದಿದ್ದ ಹರೀಶ್ ತಾಯಿ ತಂಗಮಣಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಹೀಗಾಗಿಯೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಹರೀಶ್ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಹರೀಶ್ ಕೂಡ ನೇಣಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಸೋಮವಾರಪೇಟೆ ಪಿಎಸ್ಐ ಶಿವಶಂಕರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.