ಕೊಡಗು: ಜಿಲ್ಲೆಯಲ್ಲಿ ಇದೀಗ ಮತ್ತೆ ಹುಲಿ ಆತಂಕ ಶುರುವಾಗಿದೆ. ಈಗ ಕುಶಾಲನಗರ ತಾಲೂಕಿನ ಕಾಫಿ ತೋಟದಲ್ಲಿ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.
ದಕ್ಷಿಣ ಕೊಡಗು ಪೊನ್ನಪೇಟೆ ಭಾಗದಲ್ಲಿ ಇತ್ತೀಚೆಗೆ ಮೂರು ಜನರು ಹುಲಿ ದಾಳಿಗೆ ಬಲಿಯಾಗಿದ್ರು. ಆರಣ್ಯ ಇಲಾಖೆಯ ಸತತ ಪ್ರಯತ್ನದಿಂದ ಹುಲಿ ಸಾವನ್ನಪ್ಪಿತ್ತು. ಕೂಡಿಗೆ ಗಾ.ಪಂ ವ್ಯಾಪ್ತಿಯ ಹುದುಗೂರು ಮೀಸಲು ಅರಣ್ಯ ಪ್ರದೇಶದಲ್ಲಿ ಮತ್ತು ಕುಕನೂರು ಸಮೀಪದ ಅರೆಯೂರು ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಆತಂಕ ಮೂಡಿಸಿರುವ ಹುಲಿಯ ಪತ್ತೆ ಕಾರ್ಯ ಚುರುಕುಗೊಂಡಿದೆ.
ಕಳೆದ ಒಂದು ವಾರದಿಂದ ಗ್ರಾಮದ ವಿವಿಧೆಡೆ ಹುಲಿಯ ಹೆಜ್ಜೆ ಗುರುತು ಕಾಣಿಸಿಕೊಂಡಿದ್ದು, ಜನರು ಜೀವ ಭಯದಲ್ಲಿ ಬದುಕುತ್ತಿದ್ದಾರೆ. ಸ್ಥಳೀಯ ನಿವಾಸಿ ಸಿ.ಎನ್. ಈರಪ್ಪ ಎಂಬವರ ಕಾಫಿ ತೋಟದ ಕೊಟ್ಟಿಗೆಯಲ್ಲಿದ್ದ ಎತ್ತನ್ನು ಹುಲಿ ಕೊಂದು ಹಾಕಿದ್ದು ಆತಂಕ ಉಂಟುಮಾಡಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ಸಹಕಾರ ಪಡೆದು ಕಾಫಿ ತೋಟದಲ್ಲಿ ಬೋನ್ ಇರಿಸಿದ್ದಾರೆ. ಸೋಮವಾರಪೇಟೆ ಎಸಿಎಫ್ ನೆಹರು, ವಲಯ ಅರಣ್ಯಾಧಿಕಾರಿ ಶಮ, ಅರಣ್ಯ ರಕ್ಷಕ ರಾಜಣ್ಣ ಮತ್ತಿತರರು ಹುಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.