ಕೊಡಗು : ಈ ಬಾರಿ ವರ್ಷದ ಕೊನೆ ದಿನ ವೀಕ್ ಎಂಡ್ ನಲ್ಲಿ ಬಂದಿರೋದ್ರಿಂದ ಕರ್ನಾಟಕದ ಕಾಶ್ಮೀರ್ ಕೊಡಗಿನತ್ತ ಪ್ರವಾಸಿಗರ ದಂಡೇ ಹರಿದು ಬಂದಿದೆ. 2022 ರನ್ನು ಬಿಳ್ಕೊಟ್ಟು ಹೊಸ ವರ್ಷ 2023 ರನ್ನು ಬರಮಾಡಿಕೊಳ್ಳಲು ಕೊಡಗಿಗೆ ಸಾಕಷ್ಟು ಪ್ರವಾಸಿಗರು ಆಗಮಿಸಿದ್ದರು.
ನಾಲ್ಕು ವರ್ಷಗಳ ಬಳಿಕ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು ಕೊಡಗಿನ ಬಹುತೇಕ ಎಲ್ಲ ಪ್ರವಾಸಿ ಸ್ಥಳಗಳು ಪ್ರವಾಸಿಗರಿಂದ ಗಿಜಿಗುಡುತ್ತಿದ್ದವು. ಸುಂದರ ಪ್ರಕೃತಿಯ ನಡುವೆ ಹೊಸ ವರ್ಷವನ್ನು ಆಚರಣೆ ಮಾಡಿದ ಪ್ರವಾಸಿಗರು ಭಾನುವಾರ ಮುಂಜಾನೆಯಿಂದಲೇ ಕೊಡಗಿನ ಪ್ರಕೃತಿಯ ಸೌಂದರ್ಯ ಸವಿಯಲು ಪ್ರವಾಸಿ ತಾಣಗಳತ್ತ ಹೆಚ್ಚೆಹಾಕಿದ್ದರು.
ಸಂಜೆ ಡಿಜೆ ನೈಟ್ಸ್ ಪಾರ್ಟಿ ಮೋಜು ಮಸ್ತಿ ಮಾಡಿದ ಪ್ರವಾಸಿಗರು ಇದೀಗ ಕೊಡಗಿನ ಪ್ರವಾಸಿ ಸ್ಥಳಗಳಲ್ಲಿ ಫ್ಯಾಮಿಲಿ, ಫ್ರೆಂಡ್ಸ್ ಜೊತೆಗೆ ಎಂಜಾಯ್ ಮಾಡಿದರು. ಹರಿಯ ಜುಳು ಜುಳು ನಾದದ ನದಿಯಲ್ಲಿ ಆಡುತ್ತ ಕುಣಿಯುತ್ತ ಹೊಸ ವರ್ಷವನ್ನು ಕೊಡಗಿನ ಪ್ರವಾಸಿ ಸ್ಥಳಗಳಲ್ಲಿ ಕಳೆಯುತ್ತಿದ್ದಾರೆ.
ಕೊಡಗಿನ ರಾಜ ಸೀಟ್, ದುಬಾರೆ, ಕಾವೇರಿ ನಿಸರ್ಗ ಧಾಮ, ಅಬ್ಬಿ ಫಾಲ್ಸ್ ಸೇರಿದಂತೆ ಕೊಡಗಿನ ಎಲ್ಲ ಪ್ರವಾಸಿ ಸ್ಥಳಗಳು ಪ್ರವಾಸಿಗರಿಂದ ತುಂಬಿಕೊಂಡಿತ್ತು. ಇಷ್ಟು ದಿನಗಳ ಕಾಲ ಟ್ರಾಫಿಕ್ ಹಾಗೂ ಒತ್ತಡ ಬದುಕಿನ ಜಂಜಾಟದಲ್ಲಿದ್ದವರು ಇಂದು ಕೊಡಗಿನ ಪ್ರಕೃತಿ ಸೌಂದರ್ಯದ ನಡುವೆ ಎಂಜಾಯ್ ಮಾಡುತ್ತ ಮೈಂಡ್ ಫ್ರೆಶ್ ಮಾಡಿಕೊಂಡರು.
ಕಳೆದ ನಾಲ್ಕು ವರ್ಷಗಳ ಬಳಿಕ ಇದೇ ಮೊದಲಬಾರಿಗೆ ಕೊಡಗಿಗೆ ಜನಸಾಗರರವೆ ಹರಿದು ಬಂದಿದ್ದು, ಜಲ ಪ್ರಳಯ ಹಾಗೂ ಕೋವಿಡ್ ಆತಂಕದಿಂದ ಕೊಡಗು ಜಿಲ್ಲೆಯಲ್ಲಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಎಲ್ಲದಕ್ಕೂ ಬ್ರೇಕ್ ಬಿದ್ದಿತ್ತು. ಈ ಬಾರಿ ಯಾವುದೇ ಅಡ್ಡಿ ಆತಂಕ ಇಲ್ಲದೆ ಪ್ರವಾಸಿಗರು ಹೊಸ ವರ್ಷವನ್ನು ಆಚರಣೆ ಮಾಡಿದರು. ಇನ್ನು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದರಿಂದ ಕೊಡಗಿನ ಪ್ರವಾಸೋದ್ಯಮ ಅವಲಂಬಿತರ ಮೊಗದಲ್ಲೂ ಮಂದಹಾಸ ಮೂಡಿದೆ.
ಒಟ್ಟಿನಲ್ಲಿ ಈ ಬಾರಿಯ ಹೊಸ ವರ್ಷವನ್ನು ಕೊಡಗಿನಲ್ಲಿ ಕಳೆದ ಸಹಸ್ರಾರು ಪ್ರವಾಸಿಗರು ಒತ್ತಡದ ಬದುಕಿಗೆ ಕೊಂಚ ರಿಲೀಫ್ ನೀಡಿದ್ದು, ಕೊಡಗಿನ ಪ್ರವಾಸಿ ತಾಣಗಳಲ್ಲಿ ಎಂಜಾಯ್ ಮಾಡುವ ಮೂಲಕ ಸಂತೋಷದ ಕ್ಷಣವನ್ನ ಕಳೆದರು.
ಇದನ್ನೂ ಓದಿ : ಹೊಸ ವರ್ಷಾಚರಣೆಗೆ ಸಜ್ಜಾದ ಜನ.. ಕೊಡಗಿನಲ್ಲಿ ಹೋಂ ಸ್ಟೇ, ರೆಸಾರ್ಟ್ಗಳು ಭರ್ತಿ, ಉದ್ಯಮಿಗಳಿಗೆ ಖುಷಿ