ತಲಕಾವೇರಿ/ಕೊಡಗು: ದೇಶದ ಕಾನೂನು ಎಲ್ಲರಿಗೂ ಒಂದೇ. ಕೋವಿಡ್ ಇರುವುದರಿಂದ ಕಾವೇರಿ ತೀರ್ಥೋದ್ಭವಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಕಾವೇರಿ ತೀರ್ಥೋದ್ಭವಕ್ಕೆ ದುಡಿಕೊಟ್ಟು ವಾದ್ಯ ಮೇಳದೊಂದಿಗೆ ಆಗಮಿಸಿದ ನೂರರು ಭಕ್ತರನ್ನು ತಲಕಾವೇರಿಯ ಪ್ರವೇಶ ದ್ವಾರದಲ್ಲೇ ಪೊಲೀಸರು ತಡೆದಿದ್ದರು. ಇದಕ್ಕೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಕೊರೊನಾ ಹಿನ್ನೆಲೆಯಲ್ಲಿ ಭಕ್ತರ ಆರೋಗ್ಯದ ದೃಷ್ಟಿಯಿಂದ ಭಕ್ತರ ಆಗಮನವನ್ನು ನಿರ್ಬಂಧಿಸಲಾಗಿತ್ತು. ಸರ್ಕಾರದ ನಿರ್ದೇಶನದಂತೆ ಧಾರ್ಮಿಕ ವಿಧಿಗಳಿಗೆ ಚ್ಯುತಿಯಾಗದಂತೆ ಪೂಜೆ ನೆರವೇರಿಸಿದ್ದೇವೆ ಎಂದರು.
ಕ್ಷೇತ್ರಕ್ಕೆ ಭಕ್ತರ ಪ್ರವೇಶ ನಿಷೇಧಿಸಿರುವುದಕ್ಕೆ ಭಕ್ತರಲ್ಲಿ ನಾನು ಕ್ಷಮೆ ಕೇಳುತ್ತೇನೆ. ಇಂತಹ ಕಾನೂನುಗಳನ್ನು ನಾವು ಜಾರಿಗೆ ತಂದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದೇವೆ ಎಂದು ಸಚಿವ ಸೋಮಣ್ಣ ಹೇಳಿದ್ದಾರೆ.