ಕೊಡಗು: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಜನ ಭಯದಲ್ಲಿ ಜೀವನ ಕಳೆಯುತ್ತಿದ್ದಾರೆ. ಕಾಡಾನೆಗಳಿಂದ ಆಗುವ ಅಪಾಯವನ್ನು ತಪ್ಪಿಸಲು ಆರಣ್ಯ ಇಲಾಖೆ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸುತ್ತಿದೆ. ಇದರಿಂದ ಸ್ಥಳೀಯರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ತಿತಿಮತಿ ಆರಣ್ಯ ಸುತಮುತ್ತಲಿನಲ್ಲಿ ನುರಿತ ವೈದ್ಯರು, 40 ಸಿಬ್ಬಂದಿ ಸಹಾಯದಿಂದ ಕಾಡಾನೆಗಳಿಗೆ 4 ಸಾಕಾನೆಗಳ ಸಹಾಯದಿಂದ 5 ಆನೆಗಳಿಗೆ ರೆಡಿಯೋ ಕಾಲರ್ ಅಳವಡಿಸಲಾಗಿದೆ.
ಆನೆ ಮಾನವ ಸಂಘರ್ಷವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ರೇಡಿಯೋ ಕಾಲರ್ ಅಳವಡಿಸುವ ಕಾರ್ಯ ಬಿರುಸಿನಿಂದ ಸಾಗಿದೆ. ಪಾಲಿಬೆಟ್ಟ ಸಮೀಪದ ಅಬ್ಬೂರು ಬಳಿ ಆನೆ ಕಾರ್ಯಚರಣೆ ಮಾಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಗರಿಕರ ಜೀವ ಹಾನಿ ಹಾಗೂ ಬೆಳೆ ಹಾನಿ ಯನ್ನು ತಪ್ಪಿಸಲು ಕಾಡಾನೆಗಳಿಗೆ ಕಾಲರ್ ಅಳವಡಿಸಲು ಸರ್ಕಾರ ಮುಂದಾಗಿದೆ. ಮೊದಲ ಹಂತದಲ್ಲಿ ಐದು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದ್ದು, ಮುಂದೆಯೂ ಕಾಲರ್ ಅಳವಡಿಕೆ ಕಾರ್ಯ ನಡೆಯಲಿದೆ.
ಇಪ್ಪತ್ತಕ್ಕೂ ಅಧಿಕ ಸಂಖ್ಯೆಯಲ್ಲಿ ಒಂದು ತಂಡವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳುವ ಕಾಡಾನೆಗಳ ಹಿಂಡನ್ನು ಗುರುತಿಸುವ ಅರಣ್ಯ ಸಿಬ್ಬಂದಿ ಆ ತಂಡದ ನಿರ್ವಹಣೆ ವಹಿಸುವ ಆನೆಗಳನ್ನು ಗುರುತುಮಾಡಿ ಅಂತಹ ಆನೆಗಳನ್ನು ಗುಂಪಿನಿಂದ ಬೇರ್ಪಡಿಸಿ ಅರವಳಿಕೆ ನೀಡಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಜರ್ಮನ್ ದೇಶದ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಪ್ರತಿ ರೇಡಿಯೋ ಕಾಲರ್ಗೆ ಮೂರರಿಂದ ನಾಲ್ಕು ಲಕ್ಷ ವೆಚ್ಚವಾಗುತ್ತಿದ್ದು, ಕನಿಷ್ಠ ನಾಲ್ಕು ವರ್ಷಗಳ ಕಾಲ ಇದು ತನ್ನ ಕೆಲಸ ನಿರ್ವಹಣೆ ಮಾಡಲಿದೆ.
ಜರ್ಮನ್ನ ಜಿಐಎಲ್ ಸಹಯೋಗ: ಭಾರತೀಯ ವನ್ಯಜೀವಿ ಸಂರಕ್ಷಣಾ ಸಂಸ್ಥೆ ಹಾಗೂ ಜಿಐಎಲ್ ಜರ್ಮನ್ ಇವರ ಸಹಯೋಗದೊಂದಿಗೆ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುತ್ತಿದೆ. ಮತ್ತಿಗೋಡು ಹಾಗೂ ದುಬಾರೆ ಸಾಕಾನೆಗಳ ಶಿಬಿರದ ಅಭಿಮನ್ಯು, ಮಹೇಂದ್ರ, ಧನಂಜಯ ಹಾಗೂ ಸುಗ್ರೀವ ಎಂಬ ಆನೆಗಳ ಸಹಾಯದಿಂದ ಕಾರ್ಯ ಮಾಡಲಾಗುತ್ತಿದೆ.
ಮಾವುತರು, ಕಾವಾಡಿಗಳು ಸಾಕಾನೆಗಳ ಸಹಾಯದಿಂದ ವೈದ್ಯರು ಕಾಡಾನೆಗಳ ಮೇಲೆ ಅರಿವಳಿಕೆ ಪ್ರಯೋಗಿಸಿ ಅವುಗಳನ್ನು ಪ್ರಜ್ಞೆ ತಪ್ಪಿಸಿ ಕಾಲರ್ ಅಳವಡಿಸಲಾಗುತ್ತದೆ.
ಐದು ಆನೆಗಳಿಗೆ ಕಾಲರ್ ಅಳವಡಿಸಿ ನಾಮಕರಣ: ರೇಡಿಯೋ ಕಾಲರ್ ಅಳವಡಿಸಿದ ಕಾಡಾನೆಗಳಿಗೆ ಅನನ್ಯಾ, ಉಷಾ ಹಾಗೂ ಆಕಾಂಕ್ಷ, ಅಯ್ಯಪ್ಪ ಹಾಗೂ ಮಖ್ನಾ ಎಂದು ನಾಮಕರಣ ಮಾಡಲಾಗಿದೆ. ಒಟ್ಟಾರೆಯಾಗಿ ಆನೆಗಳ ಹಾವಳಿ ತಡೆಯಲು ಆರಣ್ಯ ಇಲಾಖೆ ಮುಂದಾಗಿರುವುದು ರೈತರು ನಿಟ್ಟುಸಿರು ಬಿಡುವಂತಾಗಿದೆ.
ಇದನ್ನೂ ಓದಿ: ಅತ್ತ ಗುಡ್ಡ ಕುಸಿತ-ಇತ್ತ ಚಿಕ್ಕಹೊಳೆ ಜಲಾಶಯಕ್ಕೆ ಗಂಡಾಂತರ..? ಕಾಲುವೆ ಪಕ್ಕವೇ ಅಕ್ರಮ ಗಣಿಗಾರಿಕೆ ಆರೋಪ