ಸೋಮವಾರಪೇಟೆ/ಕೊಡಗು: ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಕಟ್ಟೆಪುರ ಸಮೀಪದ ಹೇಮಾವತಿ ಹಿನ್ನೀರಿನ ಬಳಿ ನಡೆದಿದೆ.
ಸೋಮವಾರಪೇಟೆ ತಾಲೂಕಿನ ಬೆಸ್ಸೂರಿನ ನಿವಾಸಿಗಳಾದ ಸೈನಿಕ ಲೋಕೇಶ್ (30) ಹಾಗೂ ಲತೇಶ್ (27) ನೀರಿನಲ್ಲಿ ಪ್ರಾಣ ಕಳೆದುಕೊಂಡ ದುರ್ದೈವಿಗಳು. ಇಬ್ಬರೂ ಮಧ್ಯಾಹ್ನ ಹೇಮಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ್ದರು ಎನ್ನಲಾಗಿದೆ.
ಉತ್ತರಾಖಂಡ್ನಲ್ಲಿ ಸೈನಿಕ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಲೋಕೇಶ್ಗೆ ವಾರದ ಹಿಂದಷ್ಟೇ ಹಾಸನ ಮೂಲದ ಯುವತಿ ಜೊತೆಗೆ ನಿಶ್ಚಿತಾರ್ಥವಾಗಿತ್ತು. 2009 ರಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ನೀರಿನಲ್ಲಿ ಮುಳುಗಿರುವ ಲತೇಶ್ ಮೃತ ದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ತೀವ್ರ ಶೋಧ ಮುಂದುವರೆಸಿದ್ದಾರೆ. ಸ್ಥಳಕ್ಕೆ ಶನಿವಾರಸಂತೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.