ಕೊಡಗು : ಜಿಲ್ಲೆಯ ಮಡಿಕೇರಿ ಸಮೀಪದ ಕಗೋಡ್ಲು ಬಳಿ ನಡೆದ ಗೋಹತ್ಯಾ ಪ್ರಕರಣದ ಇನ್ನೂ ನಾಲ್ವರು ಆರೋಪಿಗಳನ್ನು ಮಡಿಕೇರಿ ಪೊಲೀಸರು ಇಂದು ಬಂಧಿಸಿದ್ದಾರೆ. ವಿರಾಜಪೇಟೆ ತಾಲೂಕಿನಲ್ಲಿ ನಡೆದಿದ್ದ ಗೋ ಹತ್ಯೆ ಪ್ರಕರಣ ಮತ್ತು ಕಗೋಡ್ಲು ನಡೆದಿದ್ದ ಗೋ ಹತ್ಯೆ ಮಾಡಿ ಬಂದೂಕು ತೋರಿಸಿ ಪರಾರಿಯಾಗಿದ್ದ ಪ್ರಕರಣದ 4 ಆರೋಪಿಗಳೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಒಟ್ಟಾರೆ ಎರಡೂ ಪ್ರಕರಣ ಸೇರಿ ಈವರೆಗೆ ಗೋಹತ್ಯೆ ಮಾಡಿದ್ದ ಒಟ್ಟು 6 ಆರೋಪಿಗಳನ್ನ ಸೆರೆ ಹಿಡಿಯಲಾಗಿದೆ.
ಇಂದು ಮಹಮ್ಮದ್ ಜಾಬೀರ್ ಕೆ. ಎಮ್(27), ಟಿ ಅಬ್ದುಲ್ ಸಲಾಂ( 45),ಸಿಯಾಬ್ ಪಿ ಎ (29), ಮಹಮ್ಮದ್ ಪಿಎ (26) ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಎರಡು ದಿನಗಳ ಹಿಂದೆಯೇ ಆರೋಪಿಗಳಾದ ಮಹಮದ್ ರಿಯಾಜ್(33), ಆಶಿಕ್(26 )ಎಂಬಾತನನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ : ಗುಂಡಿಕ್ಕಿ ಹಸು ಕೊಂದ ಎರಡನೇ ಆರೋಪಿ ಬಂಧನ; ಕೊಡಗಿನಲ್ಲಿ ಉಳಿದವರಿಗೆ ಶೋಧಕಾರ್ಯ
ಕೃತ್ಯಕ್ಕೆ ಬಳಸಿದ ಕೋವಿ ಹಾಗೂ ಚಾಕು, ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಜಾಬೀರ್ ಎರಡೂ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ಮಡಿಕೇರಿ ಗ್ರಾಮಂತರ ಪೊಲೀಸರ ಚುರುಕಿನ ಕಾರ್ಯಾಚರಣೆಯಿಂದ 4 ದಿನದಲ್ಲಿ ಆರೋಪಿಗಳನ್ನ ಬಂಧಿಸಿ ಜೈಲಿಗೆ ಕಳುಹಿಸಲು ಸಾಧ್ಯವಾಗಿದೆ.
ಪ್ರಕರಣದ ಹಿನ್ನೆಲೆ : ಮಡಿಕೇರಿ ಸಮೀಪದ ಕಗೊಡ್ಲುವಿನಲ್ಲಿ ಕಳೆದ ಜೂನ್ 6ರಂದು ಗೋಹತ್ಯೆ ಪ್ರಕರಣ ನಡೆದಿತ್ತು. ಹಸುಗಳನ್ನು ಕೊಂದು ಮಾಂಸ ತೆಗೆಯುತ್ತಿದ್ದಾಗ ಸ್ಥಳೀಯರು ದಾಳಿ ಮಾಡಿದ್ದರು. ನಂತರ ದುಷ್ಕರ್ಮಿಗಳು ಮುಂಚೂಣಿ ತಂಡದ ಕಾರ್ಯಕರ್ತನ ಎದೆಗೆ ಕೋವಿಯಿಟ್ಟು ಬೆದರಿಸಿ ಕತ್ತಲಲ್ಲಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.