ಮಡಿಕೇರಿ: ರಾಜ್ಯಕ್ಕೆ ನೀರು ಕೊಡುವ ಕಾವೇರಿ ಉಗಮಸ್ಥಾನ ಕೊಡಗಿನಲ್ಲಿ ಬರದ ಛಾಯೆ ಕವಿದಿದೆ. 2018ರಿಂದ 2022ರ ವರೆಗೆ ಕೊಡಗಿನಲ್ಲಿ ಮಳೆ ಹೆಚ್ಚಾಗಿ ಜಲಪ್ರಳಯ ಸೃಷ್ಟಿಯಾಗಿತ್ತು. ಆದರೆ ಈ ಬಾರಿ ಕೊಡಗಿನಲ್ಲಿ ಮಳೆ ಕಡಿಮೆಯಾಗಿ ಬರ ಪೀಡಿತ ಪ್ರದೇಶದ ಪಟ್ಟಿಗೆ ಸೇರಿದೆ. ಕೊಡಗಿನಲ್ಲಿ ಮಳೆ ಹೆಚ್ಚಾದರೂ ಕಷ್ಟ, ಮಳೆ ಕಡಿಮೆಯಾದರೂ ಕಷ್ಟ. ಮಳೆಯಿಂದ ರೈತರು ಮಾತ್ರ ಕಂಗಾಲಾಗುವ ಪರಿಸ್ಥಿತಿ ಬಂದಿದೆ.
ಕೊಡಗು ಜಿಲ್ಲೆಯಲ್ಲಿನ 5 ತಾಲೂಕುಗಳ ಪೈಕಿ 4 ತಾಲೂಕುಗಳನ್ನು ಸರ್ಕಾರ ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಮಡಿಕೇರಿ, ವಿರಾಜಪೇಟೆ ಹಾಗೂ ಕುಶಾಲನಗರ ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳೆಂದು, ಸೋಮವಾರಪೇಟೆ ತಾಲೂಕನ್ನು ಸಾಧಾರಣ ಬರಪೀಡಿತ ತಾಲೂಕು ಎಂದು ಸರ್ಕಾರ ಘೋಷಿಸಿದೆ. ಅತ್ಯಧಿಕ ಮಳೆ ಕೊರತೆಯನ್ನು ಎದುರಿಸುತ್ತಿರುವ ಪೊನ್ನಂಪೇಟೆ ತಾಲ್ಲೂಕು ಮಾತ್ರ ಬರಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
ಕಳೆದ ವರ್ಷ ಮಡಿಕೇರಿ ತಾಲೂಕಿನಲ್ಲಿ ಶೇ.30ರಷ್ಟು, ಸೋಮವಾರಪೇಟೆ ತಾಲೂಕಿನಲ್ಲಿ ಶೇ.38ರಷ್ಟು, ವಿರಾಜಪೇಟೆ ತಾಲೂಕಿನಲ್ಲಿ ಶೇ.57ರಷ್ಟು ಮಳೆ ಕೊರತೆಯಾಗಿದೆ. ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ವಿರಾಜಪೇಟೆ ತಾಲೂಕಿನಲ್ಲಿ ಶೇ.60ರಷ್ಟು ಮಳೆಯೇ ಬಿದ್ದಿಲ್ಲ. ಸೋಮವಾರಪೇಟೆ ತಾಲೂಕಿನಲ್ಲಿ ಶೇ.42ರಷ್ಟು ಹಾಗೂ ಮಡಿಕೇರಿ ತಾಲೂಕಿನಲ್ಲಿ ಶೇ.31ರಷ್ಟು ಮಳೆಯೇ ಆಗಿಲ್ಲ. ಇಲ್ಲೆಲ್ಲಾ ಬರದ ಛಾಯೆ ಗೋಚರಿಸುತ್ತಿದೆ. ಇದೇ ರೀತಿ ಪೊನ್ನಂಪೇಟೆ ತಾಲೂಕಿನಲ್ಲಿಯೂ ವಾರ್ಷಿಕ ಶೇ.53ರಷ್ಟು ಹಾಗೂ ಮುಂಗಾರಿನಲ್ಲಿ ಶೇ.53ರಷ್ಟು ಮಳೆ ಕೊರತೆಯಾಗಿದೆ. ಹೀಗಿದ್ದರೂ, ಪೊನ್ನಂಪೇಟೆಯನ್ನು ಬರ ಪಟ್ಟಿಯಿಂದ ಹೊರಗಿಟ್ಟಿರುವುದು ಏಕೆ ಎಂಬ ಪ್ರಶ್ನೆ ಮೂಡಿದೆ.
ಕೆಲದಿನಗಳಿಂದ ಈಚೆಗೆ ಆಗೊಮ್ಮೆ ಈಗೊಮ್ಮೆ ಬಿರುಸಿನ ಮಳೆ ಬೀಳುತ್ತಿದೆಯಾದರೂ, ಅದು ಏನೇನೂ ಸಾಲದಾಗಿದೆ. ಈಗಾಗಲೇ ಭತ್ತದ ನಾಟಿ ಅವಧಿ ಮುಗಿದಿದ್ದು, ಬಹುತೇಕ ಕಡೆ ನಾಟಿಯೇ ನಡೆದಿಲ್ಲ. ಮಳೆ ಕೊರತೆಯಿಂದ ರೈತರು ಗದ್ದೆಗಳನ್ನು ಪಾಳು ಬಿಟ್ಟಿರುವ ದೃಶ್ಯಗಳು ಎಲ್ಲೆಡೆ ಕಂಡು ಬರುತ್ತಿವೆ. ನಾಟಿ ನಡೆದಿರುವ ಹಲವು ಭಾಗಗಳಲ್ಲಿ ಮಳೆಗಾಗಿ ಭತ್ತದ ಪೈರುಗಳು ಕಾಯುತ್ತಿವೆ. ಮುಸುಕಿನ ಜೋಳದ ಬೆಳೆಯೂ ಒಣಗುತ್ತಿದ್ದು, ರೈತರು ಚಿಂತಾಕ್ರಾಂತರಾಗಿದ್ದಾರೆ. ಕೊಡಗಿನಲ್ಲಿ ಮಳೆ ಹೆಚ್ಚಾದರೆ ರಾಜ್ಯದಲ್ಲಿ ನೀರಿನ ಸಮಸ್ಯೆ ಇರುವುದಿಲ್ಲ. ಕೊಡಗಿನಲ್ಲಿ ಮಳೆ ಕಡಿಮೆಯಾದರೆ ಮಾತ್ರ ಬರದ ಪರಿಸ್ಥಿತಿ ಎದುರಾಗುತ್ತಿದೆ. ಈ ಬಾರಿ ಮಳೆ ಕಡಿಮೆಯಾಗಿರುವ ಕಾರಣ ಕೃಷಿ ಅಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಲಿದೆ.
ಇದನ್ನೂ ಓದಿ : ಬರಗಾಲದ ಎಫೆಕ್ಟ್: ಸರಳ, ಅದ್ಧೂರಿ ಎನ್ನುವ ಬದಲು ಸಾಂಪ್ರದಾಯಿಕ ದಸರಾ ಹೇಳಿಕೆಗೆ ಹೋಟೆಲ್ ಮಾಲೀಕರ ಸಂಘ ಒತ್ತಾಯ