ಕೊಡಗು : ಪ್ರಕೃತಿಯನ್ನು ಆರಾಧಿಸುವ, ಕೃಷಿಯನ್ನು ಮೂಲ ಕಸುಬಾಗಿಸಿರುವ ಕೊಡಗಿನಲ್ಲಿ ಸಂಕ್ರಾಂತಿ ಹಬ್ಬವನ್ನು ಶಾಲಾ ಮಕ್ಕಳು ಧಾನ್ಯ ಲಕ್ಷ್ಮಿ ಮತ್ತು ಹಸುಗಳಿಗೆ ಪೂಜೆ ಸಲ್ಲಿಸಿ ಆಚರಿಸಿದ್ದಾರೆ. ಸೋಮವಾರ ಪೇಟೆ ತಾಲೂಕಿನ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಪು ತೊಟ್ಟು ನೃತ್ಯ ಮಾಡುತ್ತಾ ಸಂಕ್ರಾಂತಿ ಸಂಭ್ರಮಿಸಿದರು.
ಸಂಕ್ರಾಂತಿ ರೈತ ವರ್ಗದ ಹಬ್ಬ. ತಾವು ಬೆಳೆದ ದವಸ, ಧಾನ್ಯಗಳನ್ನು ಪೂಜಿಸುವ ಹಬ್ಬವೆಂದರೆ ಅದು ಸಂಕ್ರಾಂತಿ. ಹೊಸ ಬೆಳೆ ರೈತಾಪಿ ಜನರ ಕೈಸೇರುವ ಕಾಲ. ಹೊಸ ಭತ್ತ, ಧಾನ್ಯಗಳ ರಾಶಿ ಪೂಜೆ ಮಾಡುವ ದಿನ. ಈ ಮೂಲಕ ಧಾನ್ಯಗಳ ಕೊರತೆ ಉಂಟಾಗುವುದಿಲ್ಲ ಎಂಬ ನಂಬಿಕೆ ರೈತರದ್ದು. ಕಣದ ಪೂಜೆ ಮಾಡಿ, ಊರವರು ಸೇರಿ ಅಡುಗೆ ಮಾಡಿ, ಊಟ ಮಾಡಿ ಸಂತಸ ಹಂಚಿಕೊಳ್ಳುವುದು ಸಾಮಾನ್ಯ. ಆದರೆ, ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳು ಕಬ್ಬು ನೆಟ್ಟು ದವಸ ಧಾನ್ಯಗಳನ್ನಿಟ್ಟು ಹಾಲುಕ್ಕಿಸುತ್ತ ಧಾನ್ಯಗಳಿಗೆ ಪೂಜೆ ಮಾಡಿ ಸಂಕ್ರಾಂತಿ ಆಚರಿಸಿದ್ದು ವಿಶೇಷವಾಗಿತ್ತು.
ಶಾಲಾ ಆವರಣದಲ್ಲಿ ಗುಡಿಸಲು, ಎತ್ತಿನಗಾಡಿ, ಭತ್ತದ ಕಣಜ, ಕೋಳಿ, ಹಸು ಹೀಗೆ ಹಳ್ಳಿಯ ಪರಿಸರ ಸೃಷ್ಟಿಸಿ ಮಕ್ಕಳು ಸಂಭ್ರಮಿಸುವಂತೆ ಮಾಡಲಾಗಿತ್ತು. ಭಾರತ ಕೃಷಿ ಪ್ರಧಾನ ದೇಶ. ವರ್ಷವಿಡೀ ದುಡಿಯುವ ರೈತರು ಬೆಳೆ ಪಡೆದು ಸುಗ್ಗಿ ಆಚರಿಸುವ ಸಂಭ್ರಮವನ್ನು ವಿದ್ಯಾರ್ಥಿಗಳೂ ಕೂಡ ಅನುಭವಿಸಿದ್ದಾರೆ.
ಮುಖ್ಯ ಶಿಕ್ಷಕ ಸತೀಶ್ ಸಿ.ಎಸ್ ಹಾಗೂ ಅತಿಥಿ ಶಿಕ್ಷಕಿ ನವ್ಯ ಎಮ್.ಆರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಭಾರತದ ವಿವಿಧ ರಾಜ್ಯಗಳಲ್ಲಿ ಜನರು ಧರಿಸುವ ವೇಷಭೂಷಣ ಧರಿಸಿ ರಾಂಪ್ ವಾಕ್ ಮಾಡಿದರು. ಸದಾ ಪಠ್ಯ ಚಟುವಟಿಕೆಯಲ್ಲಿ ತೊಡಗುವ ವಿದ್ಯಾರ್ಥಿಗಳು ಸುಗ್ಗಿ ಮತ್ತು ಜನಾಂಗೀಯ ದಿನವನ್ನು ಒಂದೇ ದಿನ ಆಚರಿಸಿ ಪೊಂಗಲ್ ಸಿಹಿಯೂಟ ತಯಾರಿಸಿ ಸೇವಿಸಿದರು. ಮುಖ್ಯ ಶಿಕ್ಷಕ ಸತೀಶ್ ಸಿ.ಎಸ್ ಮಾತನಾಡಿ, ಕೃಷಿ ಹಾಗೂ ಅದರ ಹಿಂದಿನ ರೈತನ ಶ್ರಮದ ಫಲವಾಗಿ ಬೆಳೆ ಬಂದಾಗಿನ ರೈತರ ಸಂಭ್ರಮ ವಿದ್ಯಾರ್ಥಿಗಳಿಗೆ ಅರಿವಾಗಬೇಕು. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಇದು ಏಕತೆ ಸಾರುವ ಹಬ್ಬ: ಭಾರತದ ಹಲವಾರು ರಾಜ್ಯಗಳಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಇದು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಹಬ್ಬ. ದೇಶದ ವಿವಿಧ ರಾಜ್ಯಗಳ ಆಚಾರ,ವಿಚಾರ, ಸಂಸ್ಕೃತಿ ವೇಷಭೂಷಣದ ಅರಿವು ವಿದ್ಯಾರ್ಥಿಗಳಿಗೆ ಆಗಬೇಕು. ಈ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ವಿವಿಧ ರಾಜ್ಯಗಳ ವೇಷಭೂಷಣ ಧರಿಸಿ ಜನಾಂಗೀಯ ದಿನವನ್ನು (ಎಥ್ನಿಕ್ ಡೇ) ಆಚರಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ರಾಜಧಾನಿಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ: ಇಂದು ಸಂಜೆ ಗವಿಗಂಗಾಧರನಿಗೆ ಸೂರ್ಯ ನಮನ