ಕೊಡಗು: ತಾಲೂಕಿನ ಗಡಿ ಭಾಗ ಚೆಂಬು ಗ್ರಾಮದಲ್ಲಿ ಭಾರಿ ಮಳೆಯಾಗಿದ್ದು, ಅಕ್ಕಮ್ಮ ಎಂಬುವರ ಮನೆ ಮೇಲೆ ಧರೆಕುಸಿದಿದೆ. ಹೀಗಾಗಿ, ಘಟನಾ ಸ್ಥಳಕ್ಕೆ ಇಂದು ಕಂದಾಯ ಸಚಿವ ಆರ್. ಅಶೋಕ್ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ಹೇಳಿದರು. ಅಲ್ಲದೇ, ಸಂತ್ರಸ್ತೆ ಅಕ್ಕಮ್ಮ ಅವರಿಗೆ ಸ್ಥಳದಲ್ಲಿಯೇ 24 ಸಾವಿರ ರೂಗಳ ಚೆಕ್ ಅನ್ನು ವಿತರಿಸಿದ್ದಾರೆ. ಪೂರ್ತಿ ಮನೆ ಬಿದ್ದ ಕುಟುಂಬಕ್ಕೆ 5 ಲಕ್ಷ, ಸ್ವಲ್ಪ ಹಾನಿಯಾಗಿದ್ದರೆ 50 ಸಾವಿರ ಪರಿಹಾರದ ಭರವಸೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಬೆಂಗಳೂರಿಗೆ ತೆರಳಿದ ತಕ್ಷಣ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗುವುದು. ಹಣದ ಕೊರತೆ ಇಲ್ಲ. ಮನೆಗೆ ಹಾನಿಯಾದವರಿಗೆ ಸೂಕ್ತ ಪರಿಹಾರ ಕೊಡ್ತೀವಿ. ನೀತಿ - ನಿಯಮ ಇಲ್ಲದೇ ಅಕ್ರಮವಾಗಿ ಕಾರ್ಯ ನಿರ್ವಹಿಸುವ ಹೋಮ್ ಸ್ಟೇ ಬಗ್ಗೆ ನಿಗಾ ಇರಿಸಲಾಗುವುದು. ಪರಿಸರಕ್ಕೆ ಪೂರಕವಾಗಿ ಹೋಮ್ ಸ್ಟೇ, ರೆಸಾರ್ಟ್ ಮಾಡುವಂತೆ ಕ್ರಮ ಜರುಗಿಸುತ್ತೇವೆ ಎಂದರು.
ಕಳೆದ ಬಾರಿ ಭೂಕುಸಿತ ಆದಾಗ ಮುಂದಿನ ಕ್ರಮಗಳ ಬಗ್ಗೆ ವರದಿ ಕೊಟ್ಟಿದ್ದಾರೆ. ತಜ್ಞರ ವರದಿ ಆಧರಿಸಿಯೇ ಕೊಡಗಿನಲ್ಲಿ ಅಭಿವೃದ್ಧಿ ಮಾಡಬೇಕು. ಪ್ರಕೃತಿಗೆ ವಿರುದ್ಧವಾಗಿ ಯಾರೂ ಕೂಡ ಹೋಗಬಾರದು. ಹೋದರೆ ಅನಾಹುತ ತಪ್ಪಲ್ಲ ಎಂದು ಹೇಳಿದರು.
ನಿಷ್ಪಕ್ಷಪಾತ ತನಿಖೆ ನಡೀತಿದೆ: ಪಿಎಸ್‌ಐ ಅಕ್ರಮದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೀತಿದೆ. ತಪ್ಪಿತಸ್ಥರು ಯಾರೇ ಇದ್ದರೂ ತನಿಖೆ ಬಳಿಕ ಕ್ರಮ ಕೈಗೊಳ್ಳುತ್ತೇವೆ. ಕಾಂಗ್ರೆಸ್ ಸರ್ಕಾರ ಆಗಿದ್ದರೆ ಪ್ರಕರಣ ಮುಚ್ಚಿ ಹಾಕುತ್ತಿದ್ದರು. ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರು ಇದ್ದರು. ಅವರನ್ನೂ ನಾವು ಅರೆಸ್ಟ್ ಮಾಡಿಲ್ವಾ? ನೀವೇ ಹೇಳಿ ಎಂದು ಪ್ರಶ್ನಿಸಿದರು.
ಓದಿ: ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ.. ರಾಜ್ಯ ಸರ್ಕಾರದಿಂದ ಪೂರ್ವ ಸಿದ್ಧತಾ ಸಭೆ