ಕೊಡಗು: ಜಿಲ್ಲೆಯಲ್ಲಿ ಕಳೆದ 4 ವರ್ಷಗಳಿಂದ ಸಾಕಷ್ಟು ಕಡೆ ಭೂ ಕುಸಿತ ಸಂಭವಿಸಿದೆ. ಇದರಿಂದ ನಗರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಗೆ ತಡೆಗೋಡೆ ನಿರ್ಮಿಸಲಾಗುತ್ತಿದೆ. ಆದರೀಗ ಕಾಮಗಾರಿ ಮಧ್ಯೆಯೇ ತಡೆಗೋಡೆ ಕುಸಿದು ಬಿದ್ದಿದೆ.
ಮಡಿಕೇರಿ- ಚೆಟ್ಟಳ್ಳಿ ನಡುವಣ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾದ ಪುರಾತನ ರಸ್ತೆ ಇನ್ನಿಲ್ಲದಂತೆ ಹಾನಿಗೊಂಡಿತ್ತು. ಈ ರಸ್ತೆಯ ಅಲ್ಲಲ್ಲಿ ತಡೆಗೋಡೆ ನಿರ್ಮಿಸಲು ಸುಮಾರು 12 ಕೋಟಿ ರೂ. ವೆಚ್ಚದಲ್ಲಿ 20 ಕ್ಕೂ ಅಧಿಕ ಕಡೆ ತಡೆಗೋಡೆ ನಿರ್ಮಿಸಲಾಗುತ್ತಿದೆ. 2 ವರ್ಷಗಳಿಂದ ಈ ಕಾಮಗಾರಿ ನಡೆಯುತ್ತಲೇ ಇದೆ. ಆರಂಭದಿಂದಲೂ ಈ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಜನರು ಹೇಳುತ್ತಿದ್ದರೂ, ಸ್ಥಳೀಯ ಆಡಳಿತ ಕಾಮಗಾರಿ ನಡೆಸುತ್ತಿದೆ.
ಇದಕ್ಕೆ ಪೂರಕವಾಗಿ ಇದೀಗ ಅಬ್ಯಾಲ ಸಮೀಪ ಸುಮಾರು 60 ಅಡಿ ಉದ್ದದ ಬೃಹತ್ ತಡೆಗೋಡೆ ಕೊಚ್ಚಿ ಹೋಗಿದೆ. ಈ ಎಡವಟ್ಟನ್ನು ಮುಚ್ಚಿಕೊಳ್ಳಲು ಅಧಿಕಾರಿಗಳು ರಾತ್ರೋರಾತ್ರಿ ಕುಸಿದ ತಡೆಗೋಡೆಯ ಅವಶೇಷಗಳು ಕಾಣದಂತೆ ಮಾಡಿದ್ದಾರೆ. ಕಳಪೆ ಕಾಮಗಾರಿಯಿಂದಲೇ ತಡೆಗೋಡೆ ಕುಸಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಓದಿ: ಕೋವಿಡ್ ಲಸಿಕೆಯ ಅಡ್ಡ ಪರಿಣಾಮದಿಂದ ಮಗಳು ಸಾವು ಆರೋಪ: ₹1000 ಕೋಟಿ ರೂ. ಪರಿಹಾರ ಕೇಳಿ ಹೈಕೋರ್ಟ್ಗೆ ಅರ್ಜಿ
ಒಂದೆಡೆ ನಿರ್ಮಾಣ ಹಂತದ ತಡೆಗೋಡೆ ಕುಸಿಯುತ್ತಿದ್ದರೆ ಮತ್ತೊಂದೆಡೆ ತಡೆಗೋಡೆ ತುಂಬಿಸಲು ಪಕ್ಕದ ಬೆಟ್ಟವನ್ನೇ ಅಗೆದು ಮಣ್ಣು ಬಗೆಯಲಾಗಿದೆ. ಇದರಿಂದಾಗಿ ಬೆಟ್ಟದ ಮೇಲಿನ ಮರಗಳು ಯಾವುದೇ ಕ್ಷಣದಲ್ಲಿ ರಸ್ತೆಯ ಮೇಲೆ ಕುಸಿಯುವ ಭೀತಿ ಎದುರಾಗಿದೆ. ಮಾತ್ರವಲ್ಲದೇ ಬೆಟ್ಟವನ್ನ ಅವೈಜ್ಞಾನಿಕವಾಗಿ ಅಗೆದಿರುವುದರಿಂದ ಮಳೆಗಾಲದಲ್ಲಿ ಇಲ್ಲಿ ಭೂ ಕುಸಿತವಾಗುವುದು ಖಂಡಿತ ಎಂಬುದು ಇಲ್ಲಿನ ಅಭಿಪ್ರಾಯ.
ಮಡಿಕೇರಿ ಸೋಮವಾರಪೇಟೆ ತಾಲೂಕಿನ ಮಧ್ಯೆ ಸಂಪರ್ಕ ಕಲ್ಪಿಸುವ ಈ ರಸ್ತೆ ಅತ್ಯಂತ ಪುರಾತನವಾಗಿದೆ. ಆದ್ರೆ ಇದೀಗ ಅಧಿಕಾರಿಗಳ ಅವೈಜ್ಞಾನಿಕತೆಯಿಂದಾಗಿ ಇಡಿ ರಸ್ತೆಯೇ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ