ಮಡಿಕೇರಿ: ಲಾಕ್‍ಡೌನ್‌ನಿಂದ ಕಾಫಿ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರವು ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಸ್ಥಳೀಯ ಜನಪ್ರತಿನಿಧಿಗಳು ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬೆಳೆಗಾರರ ಒಕ್ಕೂಟದ ಸದಸ್ಯರು ಜಿಲ್ಲೆಯ ಶಾಸಕರಿಗೆ ಮನವಿ ಸಲ್ಲಿಸಿದ್ದು, ಬೇಡಿಕೆ ಈಡೇರಿಸಲು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿಗಳು ಕಾಫಿ ಬೆಳೆಗಾರರ ರಕ್ಷಣೆಗೆ ಧಾವಿಸುವಂತೆ ಆಗ್ರಹಿಸಿದ್ದಾರೆ. ಕೊಡಗು ಜಿಲ್ಲೆ ಕಳೆದ ಎರಡು ವರ್ಷದಿಂದ ನಿರಂತರವಾಗಿ ಪ್ರಾಕೃತಿಕ ವಿಕೋಪದಿಂದ ತತ್ತರಿಸಿದ್ದು, ಈ ಹೊಡೆತ ನೇರವಾಗಿ ಜಿಲ್ಲೆಯ ಬೆಳೆಗಾರರ ಮೇಲೆ ಬಿದ್ದಿದೆ. ಇದರ ಹೊಡೆತದಿಂದ ಚೇತರಿಸಿಕೊಳ್ಳಲು ಇನ್ನು ಸಾಕಷ್ಟು ವರ್ಷಗಳೇ ಬೇಕಾಗಿದೆ. ಇಂತಹ ಸಮಯದಲ್ಲಿ ಲಾಕ್‌ಡೌನ್‌ನಿಂದ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕಾಫಿ ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.
ಬಹಳಷ್ಟು ಬೆಳೆಗಾರರಿಗೆ ಕಾಫಿ, ಕಾಳುಮೆಣಸು ಕಟಾವು ಸ್ಥಗಿತಗೊಂಡು ಪ್ರಸಕ್ತ ಬೆಳೆ ನಷ್ಟವಾಗಿದೆ. ಕಾಫಿ, ಕಾಳುಮೆಣಸು ಬೆಳೆಗೆ ವ್ಯವಸ್ಥೆ ಇರುವಲ್ಲಿ ಸ್ಪಿಂಕ್ಲರ್ ಮಾಡಲು ಸಾಧ್ಯವಾಗಿಲ್ಲ. ಜೊತೆಗೆ ಸಕಾಲದಲ್ಲಿ ಮಳೆಯು ಆಗದೇ ಇರುವುದರಿಂದ ಮುಂದಿನ ವರ್ಷದ ಕೃಷಿ ಫಸಲು ಕುಂಠಿತಗೊಳ್ಳಲಿದೆ. ಕೃಷಿ ಉತ್ಪನ್ನ ವ್ಯಾಪಾರ ವಹಿವಾಟು ಸ್ಥಗಿತವಾಗಿದೆ. ತೋಟದಲ್ಲಿ ಮತ್ತು ಮಿಶ್ರ ಬೆಳೆಗಳಲ್ಲಿ ಮುಂದಿನ ಫಸಲಿನ ಮೇಲೆ ದುಷ್ಪರಿಣಾಮ ಬೀರಲಿದೆ. ಇದರಿಂದ ಕೊಡಗಿನ ಕಾಫಿ ಮತ್ತು ಇತರ ಎಲ್ಲಾ ಕೃಷಿ ಉತ್ತೇಜಿಸುವ ಪ್ಯಾಕೇಜ್ ನೀಡಬೇಕು. ಕೊಡಗಿನ ಎಲ್ಲಾ ಬೆಳೆಗಾರರು ಎಲ್ಲಾ ಬ್ಯಾಂಕ್‌ಗಳ ಹಣಕಾಸು ಸಂಸ್ಥೆಗಳ, ಖಾಸಗಿಯಾಗಿ ಪಡೆದಿರುವ ಎಲ್ಲಾ ರೀತಿಯ ಸಾಲಗಳ ಬಡ್ಡಿ ಮನ್ನಾ ಮಾಡಿ ಮುಂದೆ ಬಡ್ಡಿ ರಹಿತವಾಗಿ ವಿಸ್ತರಿಸಬೇಕು. ಸಾಲ ಮರು ಪಾವತಿಗೆ ಯಾವುದೇ ಒತ್ತಡವನ್ನು ಹಾಕದಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಸುನಿಲ್ ಸುಬ್ರಮಣಿ ಸೇರಿದಂತೆ ಕಾಫಿ ಬೆಳೆಗಾರರು ಒತ್ತಾಯಿಸಿದ್ದಾರೆ.