ಭಾಗಮಂಡಲ/ಕೊಡಗು: ತಲಕಾವೇರಿಯಲ್ಲಿ ಭೂಕುಸಿತವಾದ ಸ್ಥಳಕ್ಕೆ ತೆರಳಲು ಜನಪ್ರತಿನಿಧಿಗಳಿಗೆ ಹಲವು ವಿಘ್ನಗಳು ಎದುರಾಗಿದ್ದು, ಹರಸಾಹಸ ಮಾಡಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅಂತೂ ಭಾಗಮಂಡಲ ತಲುಪಿದ್ದಾರೆ.
ಮಡಿಕೇರಿ ತಾಲೂಕಿನ ತಾವೂರು ಸಮೀಪದ ಚೆದುಕಾರ್ ಸೇತುವೆ ಮೇಲೆ ಆಳೆತ್ತರಕ್ಕೆ ಹರಿಯುತ್ತಿದ್ದ ನೀರಿನಲ್ಲಿ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್ ಹಾಗೂ ಎಸ್ಪಿ ಕ್ಷಮಾ ಮಿಶ್ರಾ ಹಾಗೂ ಅಧಿಕಾರಿಗಳು ಎನ್‌ಡಿಆರ್‌ಎಫ್ ಸಿಬ್ಬಂದಿ ಜೀಪ್ ಮೂಲಕ ಸೇತುವೆಯನ್ನು ದಾಟಿ ಭಾಗಮಂಡಲ ತಲುಪಿದರು. ನಂತರ ಲೈಫ್ ಜಾಕೇಟ್‌ಗಳನ್ನು ಧರಿಸಿ ಬೋಟ್ ಸಹಾಯದಿಂದ ಪ್ರವಾಹದಿಂದ ತುಂಬಿ ಹರಿಯುತ್ತಿದ್ದ ತ್ರಿವೇಣಿ ಸಂಗಮದಲ್ಲಿ ಬೋಟ್ ಮೂಲಕವೇ ಪ್ರವಾಹದ ವಸ್ತುಸ್ಥಿತಿಯನ್ನು ಅವಲೋಕಿಸಿದರು.
ತಲಕಾವೇರಿಗೆ ಹೋಗುವ ದಾರಿ ಮಧ್ಯೆ ಅಲ್ಲಲ್ಲಿ ಬೃಹತ್ ಮರಗಳು, ಬಂಡೆಗಳು ಹಾಗೂ ಮಣ್ಣಿನ ಬೃಹತ್ ರಾಶಿಯೇ ಬಿದ್ದಿರುವುದರಿಂದ ದುರ್ಘಟನಾ ಸ್ಥಳಕ್ಕೆ ಹೋಗಲು ನಿನ್ನೆ ಸಾಧ್ಯವಾಗಿರಲಿಲ್ಲ. ಅಲ್ಲದೆ, ರಾತ್ರಿಯಿಡಿ ಮಳೆಯ ಅಬ್ಬರ ಜೋರಾಗಿದ್ದರಿಂದ ಅತ್ತ ಗುಡ್ಡಗಳು ಜರಿಯುತ್ತಿವೆ. ಇತ್ತ ಗಾಳಿ-ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ರಕ್ಷಣಾ ಪಡೆಗಳಿಗೆ ಕಾರ್ಯಾಚರಣೆಗೂ ಅಡ್ಡಿಯಾಗಿತ್ತು. ಹೀಗಾಗಿ ಇಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ನೀರು:
ಭಾರಿ ಮಳೆಗೆ ಕಾವೇರಿ ನದಿಯಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ 275ಕ್ಕೂ ನೀರು ನುಗ್ಗಿದೆ. ಅಲ್ಲದೆ ಅಲ್ಲಲ್ಲಿ ಬರೆ ಕುಸಿದಿದೆ. ಕುಶಾಲನಗರದ ಡಿಪ್ಲೊಮಾ ಕಾಲೇಜು ಬಳಿಯ ಹೆದ್ದಾರಿ ಮೇಲೆ 2 ಅಡಿಯಷ್ಟು ನೀರು ನಿಂತಿದೆ. ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವ ನೀರಿನಲ್ಲೇ ವಾಹನಗಳು ಸಂಚರಿಸುತ್ತಿವೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹೆದ್ದಾರಿ ಮೇಲೆ ಮತ್ತಷ್ಟು ನೀರು ಹರಿಯುವ ಸಾಧ್ಯತೆಯಿದ್ದು, ರಾಷ್ಟ್ರೀಯ ಹೆದ್ದಾರಿ 275 ಯಾವಾಗ ಬೇಕಾದರೂ ಬಂದ್ ಆಗುವ ಸಾಧ್ಯತೆಯಿದೆ.