ಕೊಡಗು: ಹೆಣ್ಣು ಮಕ್ಕಳ ಮದುವೆ ವಯೋಮಿತಿ ಮರು ಪರಿಶೀಲನೆಗೆ ಕೇಂದ್ರ ಸರ್ಕಾರ ಮುಂದಾಗಿರುವುದು ಆಶಾದಾಯಕ ಬೆಳವಣಿಗೆ. ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡುತ್ತಿದ್ದಾರೆ. ಆದರೆ, ಸಣ್ಣ ವಯಸ್ಸಿನಲ್ಲಿ ಮದುವೆಯಾಗುವುದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. ಹೆಣ್ಣು ಪ್ರೌಢಾವಸ್ಥೆಗೆ ಬಂದ ಕೂಡಲೇ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳುವಷ್ಟೇ ಮುಖ್ಯವಲ್ಲ ಎಂದು ಪ್ರಜ್ಞಾವಂತ ತಾಯಂದಿರು ಅಭಿಪ್ರಾಯಪಟ್ಟಿದ್ದಾರೆ.
ತಾಯ್ತನ, ಹೆಣ್ಣಿನ ಆರೋಗ್ಯ, ಜನನ ಪೂರ್ವ, ಜನನದ ನಂತರದ ಮಗು ಹಾಗೂ ತಾಯಿಯ ಪೌಷ್ಟಿಕತೆ ಕುರಿತು ಸಮಿತಿ ಅಧ್ಯಯನ ಮಾಡಿದೆ. ಅಲ್ಲದೇ ಮಹಿಳೆಯರು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ಉತ್ತೇಜನ ನೀಡಲು ಶಿಫಾರಸು ಮಾಡಿದೆ.
ಪ್ರಸ್ತುತ ಮದುವೆ ವಯಸ್ಸು ಹೆಣ್ಣು ಮಕ್ಕಳಿಗೆ 18 ಹಾಗೂ ಗಂಡು ಮಕ್ಕಳಿಗೆ 21 ವರ್ಷ ಎಂಬ ಕಾಯ್ದೆ ಜಾರಿಯಲ್ಲಿದೆ. ಆದರೆ, ಹೆಣ್ಣು ಮಕ್ಕಳ ವಿವಾಹದ ವಯೋಮಿತಿಯನ್ನು 21 ಎಂದು ಕಾನೂನಾತ್ಮಕವಾಗಿ ಜಾರಿಗೆ ತರಬೇಕು. ಚಿಕ್ಕಂದಿನಲ್ಲೇ ವಿವಾಹ ಮಾಡಿದರೆ ಹಲವು ಮಹಿಳೆಯರಿಗೆ ದೈಹಿಕ, ಭೌದ್ಧಿಕ ಮತ್ತು ಸಾಮಾಜಿಕವಾಗಿ ಸಾಕಷ್ಟು ನೋವುಗಳನ್ನು ಅನುಭವಿಸುತ್ತಾರೆ. ಪೋಷಕರು ಮಕ್ಕಳಿಗೆ ಮೊದಲು ಉನ್ನತ ಶಿಕ್ಷಣ ಕೊಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಅರುಂಧತಿ ಸಲಹೆ ನೀಡಿದ್ದಾರೆ.
ವಿವಾಹಿತ ಮಹಿಳೆಯರು ಗಂಡನ ಅಧೀನದಲ್ಲಿ ಇರಬೇಕು ಎಂಬ ನಿರೀಕ್ಷೆ ಸಾಮಾಜಿಕ ವಾಸ್ತವ. ಈ ರೀತಿಯ ಶಕ್ತಿ ಅಥವಾ ಅಧಿಕಾರದ ಅಸಮತೋಲನ ವಯಸ್ಸಿನ ತಾರತಮ್ಯದಿಂದ ಬಂದಿದೆ. ಕಿರಿಯ ವಯಸ್ಸಿನ ಹೆಂಡತಿ, ಹಿರಿಯ ವಯಸ್ಸಿನ ಗಂಡನನ್ನು ಗೌರವಿಸುವ ಮತ್ತು ಆತನನ್ನು ನೋಡಿಕೊಳ್ಳುತ್ತಾರೆ ಎನ್ನುವ ನಿರೀಕ್ಷೆ ಹಿಂದಿನಿಂದಲೂ ಇದೆ. ಇದು ವೈವಾಹಿಕ ಸಂಬಂಧದಲ್ಲಿ ಮೊದಲೇ ಅಸ್ತಿತ್ವದಲ್ಲಿರುವ ಲಿಂಗ ತಾರತಮ್ಯವನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ. ಹಾಗಾಗಿ ವಿವಾಹದ ವಿಚಾರದಲ್ಲಿ ಹೆಣ್ಣು ಮತ್ತು ಗಂಡಿಗೆ ಏಕ ಪ್ರಕಾರವಾದ ವಯಸ್ಸನ್ನು ನಿಗದಿಪಡಿಸಬೇಕು. ಸಾಮಾಜಿಕ ಅಸಮಾನತೆ ತೊಲಗುತ್ತದೆ. ಅಲ್ಲದೇ ಮಹಿಳೆ ಸಾಮಾಜಿಕ ಹಾಗೂ ಆರ್ಥಿಕವಾಗಿಯೂ ಸ್ವಾವಲಂಬನೆ ಆಗುತ್ತಾಳೆ ಎನ್ನುವುದು ಪೋಷಕರ ಅಭಿಪ್ರಾಯ.
ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೆಟ್ಲಿಯ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ. ಇದರಲ್ಲಿ ನೀತಿ ಆಯೋಗದ ಆರೋಗ್ಯ ಸದಸ್ಯ ಡಾ. ವಿನೋದ್ ಪೌಲ್ ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಸದಸ್ಯರಾಗಿದ್ದು, ಸಮಿತಿಯ ವರದಿಯ ನಂತರ ಕೇಂದ್ರ ಯಾವ ರೀತಿಯ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.