ಕೊಡಗು: ದಕ್ಷಿಣ ಕೊಡಗಿನಲ್ಲಿ ಕಳೆದ ಹತ್ತು ದಿನಗಳ ಹಿಂದೆ ಇಬ್ಬರನ್ನು ಬಲಿ ತೆಗೆದುಕೊಂಡು ಜನರಲ್ಲಿ ಆತಂಕ ಹುಟ್ಟಿಸಿದ್ದ ನರಹಂತಕ ಹುಲಿಯ ಕಾರ್ಯಾಚರಣೆ 12ನೇ ದಿನಕ್ಕೆ ಕಾಲಿಟ್ಟಿದೆ. ಹುಲಿ ಶೋಧಕ್ಕೆ ಇದೀಗ ಬಂಡೀಪುರದ ಶ್ವಾನ ರಾಣಾನನ್ನು ಕರೆತರಲಾಗಿದೆ.
ಕಳೆದ ಹತ್ತು ದಿನಗಳ ಹಿಂದೆ ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿ, ಕುಮಟೂರು ಭಾಗದಲ್ಲಿ ಹುಲಿ ಇಬ್ಬರನ್ನು ಬಲಿ ತೆಗೆದುಕೊಂಡಿತ್ತು. ಇದಕ್ಕೂ ಮುನ್ನ ಜಾನುವಾರುಗಳ ಮೇಲೆಯೂ ದಾಳಿ ಮಾಡಿತ್ತು. ಇದರಿಂದ ಹುಲಿ ಸೆರೆಗೆ ಮುಂದಾಗಿದ್ದ ಅರಣ್ಯ ಇಲಾಖೆ ಕಳೆದ 12 ದಿನಗಳಿಂದ ತೀವ್ರ ಶೋಧಕಾರ್ಯ ಮುಂದುವರೆಸಿದೆ.
ಮತ್ತಿಗೋಡು ಆನೆ ಶಿಬಿರದ ಗಜಪಡೆಗಳೂ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಎಷ್ಟೇ ಹುಡುಕಾಟ ನಡೆಸಿದ್ರೂ ಹುಲಿ ಮಾತ್ರ ಪತ್ತೆಯಾಗಿಲ್ಲ. ಹೀಗಾಗಿ ಶೋಧಕ್ಕೆ ಎಕ್ಸ್ಪರ್ಟ್ ಆದ ಬಂಡೀಪುರದ ಶ್ವಾನ ರಾಣಾನನ್ನು ಕರೆತರಲಾಗಿದೆ.
ಪದೇ ಪದೆ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿರಾಯ ಕಳೆದ 6 ದಿನಗಳಿಂದ ಯಾವುದೇ ದಾಳಿ ನಡೆಸಿಲ್ಲ. ಹೀಗಾಗಿ ಟಿ. ಶೆಟ್ಟಿಗೇರಿ, ಕುಮಟೂರು ಭಾಗದಿಂದ ಹುಲಿ ಹೊರ ಹೋಗಿರುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಆಪರೇಷನ್ ಕ್ಯಾಂಪ್ ಅನ್ನು ಬೆಳ್ಳೂರು ಗ್ರಾಮಕ್ಕೆ ಶಿಫ್ಟ್ ಮಾಡಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.
ಕೊನೆಯದಾಗಿ ಬೆಳ್ಳೂರು ಗ್ರಾಮದಲ್ಲಿ ಜಾನುವಾರು ಮೇಲೆ ದಾಳಿಯಾಗಿದ್ದು, ಆ ವ್ಯಾಪ್ತಿಯಲ್ಲಿ ಎಲ್ಲಿಯಾದ್ರೂ ಹುಲಿ ಅಡಗಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಸಿಬ್ಬಂದಿ ಹುಡುಕಾಟದಲ್ಲಿ ಭಾಗಿಯಾಗಿದ್ದು, ನಾಗರಹೊಳೆ ಹುಲಿ ಯೋಜನೆಯ ನಿರ್ದೇಶಕ ಮಹೇಶ್ ನೇತೃತ್ವದಲ್ಲಿ ಆಪರೇಷನ್ ಟೈಗರ್ ನಡೆಯುತ್ತಿದೆ.