ಮಡಿಕೇರಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕರ್ನಾಟಕದ ಕೊಡುಗೆಯೂ ಅಪಾರ. ಇಡೀ ಹೋರಾಟಕ್ಕೆ ವೈಚಾರಿಕತೆಯ ಆಯಾಮ ನೀಡಿದ್ದು ಸಹ ಇಲ್ಲಿಂದಲ್ಲೇ..! ರಾಮ ಜನ್ಮಭೂಮಿಯ ಹೋರಾಟ ಇಡೀ ದೇಶಕ್ಕೆ ಸಂಬಂಧಿಸಿದ್ದರೂ ದಕ್ಷಿಣ ಭಾರತದ ಮಟ್ಟಿಗೆ ಕರ್ನಾಟಕದ ಕೊಡುಗೆ ಮಹತ್ವದ್ದಾಗಿದೆ.
1960 ರಿಂದ 2019ರ ತನಕ ವಿವಿಧ ಆಯಾಮಗಳಲ್ಲಿ ರಾಜ್ಯದಲ್ಲಿ ಹೋರಾಟ ನಡೆದಿದೆ. ಲಕ್ಷಾಂತರ ಜನ ಹಲವು ಸಂಕಲ್ಪಗಳನ್ನು ತೊಟ್ಟು ಮಂದಿರ ನಿರ್ಮಾಣಕ್ಕೆ ವ್ಯಾಪಕವಾದ ಬೆಂಬಲವನ್ನು ನೀಡಿದ್ದರು. ಅದರಂತೆ ವಿಶಿಷ್ಟ ಸಂಪ್ರದಾಯ ಹಾಗೂ ಆಚರಣೆಗಳನ್ನು ಮೇಳೈಸಿಕೊಂಡ ಕೊಡಗಿನ ಜನತೆ ರಾಮನ ಮೂಲ ಭೂಮಿಯಲ್ಲಿ ಮಂದಿರ ಕಟ್ಟಿ ಕಣ್ತುಂಬಿಕೊಳ್ಳಲು ಶಬರಿಯಂತೆ ಹಪಹಪಿಸುತ್ತಿದೆ. ಅದಕ್ಕೆ ಸ್ಪೂರ್ತಿ ಎನ್ನುವಂತೆ ಇಲ್ಲೊಬ್ಬರು ರಾಮ ಜನ್ಮ ಭೂಮಿಯಿಂದ ತಂದ ಮೃತ್ತಿಕೆ (ಮಣ್ಣು)ನ್ನು ಸುಮಾರು 30 ವರ್ಷಗಳಿಂದ ಭಕ್ತಿಯಿಂದ ಪೂಜಿಸುತ್ತಾ ರಾಮ ಮಂದಿರದ ಸಂಕಲ್ಪ ತೊಟ್ಟಿದ್ದಾರೆ.
ಅಯೋಧ್ಯೆಯಲ್ಲಿ ಮೂಲ ನೆಲೆಗೆ ಹೋರಾಟಗಳು ಪ್ರಾರಂಭವಾದ ಸಂದರ್ಭದಲ್ಲಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಚಿ.ನಾ.ಸೋಮೇಶ್ ಮಂದಿರ ನಿರ್ಮಾಣ ಕನಸು ಕಂಡವರು. ಕೊಡಗಿನಲ್ಲಿ ನೆಲೆಸಿರುವ ಇವರು ರಾಮ ಜನ್ಮ ಭೂಮಿ ಹೋರಾಟದಲ್ಲಿ ಭಾಗವಹಿಸಿದ್ದರು. 1990 ರಂದು ಅಯೋಧ್ಯೆಯ ಕರಸೇವೆ ಸಮಯದಲ್ಲಿ ಉಂಟಾದ ಗದ್ದಲದ ನಡುವೆ ವಿಶ್ವ ಹಿಂದೂ ಪರಿಷತ್‌ನ ಆಗಿನ ಪ್ರಾಧಾನ ಕಾರ್ಯದರ್ಶಿ ಅಶೋಕ್ ಸಿಂಘಾಲ್ ಅವರ ತಲೆಗೆ ಕಲ್ಲೇಟು ಬಿದ್ದಿತ್ತು. ಆ ವೇಳೆ ಸೋಮೇಶ್ ಸಿಂಘಾಲ್ ಅವರ ತಲೆಗೆ ಬಟ್ಟೆಯನ್ನು ಒತ್ತಿ ಹಿಡಿದಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಅಯೋಧ್ಯೆಗೆ ಹೊರಟಿದ್ದಾಗ 26 ರ ಪ್ರಾಯದ ತರುಣರಾಗಿದ್ದ ಸೋಮೇಶ್ ಅಂದು ನಡೆದ ಗಲಭೆಯ ಘಟನೆಗಳನ್ನು ಕಣ್ಣಿಗೆ ಕಟ್ಟಿದಂತೆ ಹೇಳುತ್ತಾರೆ.
1990 ಆಗಸ್ಟ್ 30 ಅಯೋಧ್ಯೆಯ ಹನುಮಾನ್ ಗಡಿಯಲ್ಲಿ ಗಲಾಟೆ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಸಿಂಘಾಲ್ ಅವರಿಗೆ ಕಲ್ಲೇಟು ಬಿದ್ದು ರಕ್ತ ಹರಿಯುತ್ತಿತ್ತು. ಕೂಡಲೇ ಕೈಯಲ್ಲಿದ್ದ ಟವೆಲ್ ತೆಗೆದು ಅವರ ತಲೆ ಹಿಡಿದು ಶ್ರೀರಾಮ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಒಂದು ದಿನ ಅಲ್ಲೇ ಇದ್ದು ಸ್ಥಳೀಯ ಸಂಘಟನೆ ಕಾರ್ಯಕರ್ತರ ಮನೆಗೆ ತೆರಳಿದೆವು. ಒಂದು ದಿನ ಅಲ್ಲಿಯೇ ಸಿಂಘಾಲ್ ಅವರಿಗೆ ಸಹಾಯಕನಾಗಿದ್ದೆ. ನವೆಂಬರ್ 5 ರವರೆಗೆ ಅಯೋಧ್ಯೆಯಲ್ಲೇ ಇದ್ದೇವು. ನಂತರ ಶ್ರೀರಾಮನ ದರ್ಶನ ಪಡೆದು ಅಲ್ಲಿನ ಮಣ್ಣನ್ನು ತಂದಿದ್ದೆ. ಈಗಲೂ ಈ ಮಣ್ಣಿಗೆ ದಿನ ನಿತ್ಯ ಪೂಜಿಸುತ್ತಿದ್ದೇನೆ. ಇದೀಗ ರಾಮ ಮಂದಿರ ನಿರ್ಮಾಣ ಆಗುತ್ತಿರುವುದು ಪ್ರತಿಯೊಬ್ಬರಿಗೂ ಹಿಂದೂಗಳಿಗೆ ಸಂತೋಷ ಆಗುತ್ತಿದೆ. ಇದರ ಹಿಂದಿನ ಹಿರಿಯರ ತ್ಯಾಗ-ಬಲಿದಾನ ಅವಿಸ್ಮರಣೀಯ ಎಂದು ಸ್ಮರಿಸಿಕೊಳ್ಳುತ್ತಾರೆ ಸೊಮೇಶ್.