ಕೊಡಗು: ಜಿಲ್ಲೆಯಾದ್ಯಂತ ಇಂದಿನಿಂದ ಉತ್ತಮ ಮಳೆ ಪ್ರಾರಂಭವಾಗಿದ್ದು, ಮಂಜಿನ ನಗರಿ ಮಡಿಕೇರಿಯಲ್ಲಿ ಮಂಜು ಮುಸುಕಿದ ವಾತಾವರಣ ಹಾಗೂ ಮೈ ಕೊರೆವ ಚಳಿ ಆವರಿಸಿದೆ.
ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬಿಟ್ಟು, ಬಿಟ್ಟು ಸುರಿಯುತ್ತಿರುವ ಮಳೆಯಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಮಳೆಯಲ್ಲೇ ತೊಯ್ದು ಪರದಾಡಬೇಕಾಯಿತು. ಹಾಗೆಯೇ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರೈನ್ ಕೋಟ್ ಹಾಗೂ ಕೊಡೆ ಹಿಡಿದು ಸುರಿಯುತ್ತಿದ್ದ ಮಳೆಯಲ್ಲೇ ಸಾಗಿದರು.
ಕಳೆದ ವರ್ಷ ಈ ವೇಳೆಗಾಗಲೇ ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗೆ ಇದೆ. ಇದೀಗ ಕಾವೇರಿಯ ಉಗಮ ಸ್ಥಾನ ತಲಕಾವೇರಿ ಭಾಗಮಂಡಲ ಭಾಗದಲ್ಲೂ ಉತ್ತಮ ಮಳೆಯಾಗುತ್ತಿದ್ದು, ಕೊಡಗಿನ ಜೀವದಾತೆ ಕಾವೇರಿ ನದಿ ಕೂಡ ಮೈದುಂಬಿ ಹರಿಯುತ್ತಿದ್ದಾಳೆ. ಇನ್ನು ಮಳೆ ಇದೇ ರೀತಿ ಮುಂದುವರೆದರೆ ತ್ರಿವೇಣಿ ಸಂಗಮ ಭರ್ತಿಯಾಗಲಿದೆ.
ಕೊಡಗು ಜಿಲ್ಲೆಯ ಮಳೆ ವಿವರ:
2019 ರ ಜುಲೈ 4 ರ ಬೆಳಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕೊಡಗು ಜಿಲ್ಲೆಯಲ್ಲಿ 31.99 ಮಿ.ಮೀ ಸರಾಸರಿ ಮಳೆಯಾಗಿತ್ತು. ಕಳೆದ ವರ್ಷ ಇದೇ ದಿನ 2.60 ಮಿ.ಮೀ. ಮಳೆಯಾಗಿತ್ತು. ಈ ಬಾರಿ ಜನವರಿಯಿಂದ- ಜುಲೈ 4 ರವರೆಗೆ 483.34 ಮಿ.ಮೀ ಮಳೆ ಬಿದ್ದಿದ್ದರೆ, ಕಳೆದ ವರ್ಷ ಈ ವೇಳೆಗೆ 1361.03 ಮಿ.ಮೀ ವರ್ಷಧಾರೆ ಆಗಿತ್ತು.
ಪ್ರಸ್ತುತ ಮಡಿಕೇರಿ ತಾಲೂಕಿನಲ್ಲಿ 52.95 ಮಿ.ಮೀ ಸರಾಸರಿ ಮಳೆಯಾದರೆ, ಕಳೆದ ವರ್ಷ ಇದೇ ದಿನ 3.25 ಮಿ.ಮೀ ಮಳೆ ದಾಖಲಾಗಿತ್ತು. ಪ್ರಸ್ತುತ ಜನವರಿಯಿಂದ ಇಲ್ಲಿವರೆಗೆ 600.45 ಮಿ.ಮೀ ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 1856.05 ಮಿ.ಮೀ ಮಳೆಯಾಗಿತ್ತು. ಆದರೆ ಇದೀಗ 1251.75 ಮಿ.ಮೀ ಆಗಿದೆ.