ಕೊಡಗು: ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ, ಸ್ಥಿರವಾಗಿದೆ. ಸಿಎಂ ಯಡಿಯೂರಪ್ಪ ರಾಜಾಹುಲಿ ಇದ್ದಂತೆ ಎಂದು ಕಂದಾಯ ಸಚಿವ ಆರ್.ಅಶೋಕ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಮುಂದಿನ ಮೂರು ವರ್ಷ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಅವರ ನೇತೃತ್ವದಲ್ಲಿ ಪ್ರವಾಹ, ಕೋವಿಡ್ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುತ್ತೇವೆ ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇಬ್ಬರು ಮುಖ್ಯಮಂತ್ರಿಗಳು ಇದ್ದರು. ಹಾಗೆಯೇ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಇಬ್ಬರ ಆಡಳಿತ ಇತ್ತು ಅನಿಸುತ್ತೆ. ಆದರೆ ಯಡಿಯೂರಪ್ಪನವರು ಹಾಗಲ್ಲ. ಅವರು ನಾಲ್ಕು ಬಾರಿ ಸಿಎಂ ಆಗಿದ್ದವರು. ಅವರಿಗೆ ಯಾರೂ ಸಲಹೆ ನೀಡುವ ಅಗತ್ಯವಿಲ್ಲ. ವಿರೋಧ ಪಕ್ಷದವರು ಸುಮ್ಮನೆ ಗೂಬೆ ಕೂರಿಸುವ ಉದ್ದೇಶದಿಂದ ಹೀಗೆ ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕೆಗೆ ತಿರುಗೇಟು ನೀಡಿದರು.