ಮಡಿಕೇರಿ: ಕೊರೊನಾ ಆತಂಕದ ನಡುವೆ ರಾಜ್ಯ ಸರ್ಕಾರ ನವೆಂಬರ್ 17 ರಿಂದ ಪದವಿ ಕಾಲೇಜುಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಕೆಲವು ಮಾರ್ಗಸೂಚಿಗಳನ್ನು ಹಾಕಿಕೊಂಡು ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ನವೆಂಬರ್ 17 ರಿಂದ ಪುನಾರಂಭಿಸಲು ತೀರ್ಮಾನಿಸಿದೆ. ಹಾಗೆಯೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಅಲ್ಲದೇ ವಿದ್ಯಾರ್ಥಿಗಳು ಕಾಲೇಜಿಗೆ ಕಡ್ಡಾಯವಾಗಿ ಹಾಜರಾಗಲೇಬೇಕು ಎನ್ನುವ ನಿಯಮವಿಲ್ಲ. ಆನ್‌ಲೈನ್ ಕ್ಲಾಸ್ ಮೂಲಕವೂ ತರಗತಿಗೆ ಹಾಜರಾಗಲು ಅವಕಾಶ ನೀಡಿದೆ. ಆಫ್‌ಲೈನ್ ಅಥವಾ ಆನ್‌ಲೈನ್ ಇವೆರಡರಲ್ಲಿ ಯಾವುದನ್ನು ಬೇಕಾದರೂ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು. ಅಂತಿಮ ನಿರ್ಧಾರ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಬಿಟ್ಟಿದ್ದು. ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ಪಡೆದು ಪ್ರಾಂಶುಪಾಲರಿಗೆ ನೀಡಬೇಕಾಗುತ್ತದೆ. ಈಗಾಗಲೇ 100 ಕ್ಕೂ ಅಧಿಕ ಪೋಷಕರು ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಒಪ್ಪಿಗೆ ಪತ್ರಗಳನ್ನು ಬರೆದುಕೊಟ್ಟಿದ್ದಾರೆ ಎಂದು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ಕಾಲೇಜಿಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಬರಬೇಕು. ಅನ್‌ಲೈನ್ ತರಗತಿಗಳು ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಸರಿಯಾಗಿ ಅರ್ಥ ಆಗುವುದಿಲ್ಲ. ಹೀಗಾಗಿ ಕಾಲೇಜುಗಳನ್ನು ಪ್ರಾರಂಭಿಸುವುದು ಸೂಕ್ತ. ಮನೆಯಲ್ಲಿ ಮಕ್ಕಳು ಸರಿಯಾಗಿ ಓದುವುದಿಲ್ಲ. ಕೊರೋನಾ ಮನೆಯಲ್ಲಿ ಇದ್ದರೂ ಬರುತ್ತದೆ. ಇಲ್ಲದೇ ಹೋದರೂ ಬರುತ್ತದೆ. ಆದ್ದರಿಂದ ಅದರ ಬಗ್ಗೆ ಚಿಂತನೆ ಬಿಟ್ಟು ಕಾಲೇಜುಗಳನ್ನು ತೆರೆಯಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಪೋಷಕರು ತಿಳಿಸಿದ್ದಾರೆ.