ಕೊಡಗು: ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಂತಿರುವ ಜಿಲ್ಲೆಯ ಜನರ ತಲೆ ಮೇಲೆ ಕಸ್ತೂರಿ ರಂಗನ್ ವರದಿಯ ತೂಗುಗತ್ತಿ ನೇತಾಡುತ್ತಿದೆ. ಈಗ ರಾಜಕೀಯ ನಾಯಕರ ಮೇಲೆ ಇದು ಪರಿಣಾಮ ಬೀರುತ್ತದೆಯೇ ಎಂಬ ಚರ್ಚೆ ನಡೆದಿದೆ.
2020 ಡಿಸೆಂಬರ್ ಅಂತ್ಯದೊಳಗೆ ಕಸ್ತೂರಿ ರಂಗನ್ ವರದಿ ಜಾರಿ ಮಾಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಕೋರ್ಟ್ಗೆ ವರದಿ ಜಾರಿ ಮಾಡುವುದಾಗಿ ಅಫಿಡವಿಟ್ ಸಲ್ಲಿಸಿದೆ. ಹೀಗಾಗಿ ಜಿಲ್ಲೆಯ ಸಾವಿರಾರು ಕುಟುಂಬಗಳಿಗೆ ತಮ್ಮ ನೆಲೆ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವರದಿಯನ್ನು ಜಾರಿ ಮಾಡಲು ಬಿಡುವುದಿಲ್ಲ. ಒಂದು ವೇಳೆ ಜಾರಿಯಾದ್ರು ತಿದ್ದುಪಡಿ ಮಾಡಿಸಿ ಜಿಲ್ಲೆಯ ಜನತೆಗೆ ಯಾವುದೇ ತೊಂದರೆಯಾಗದಂತೆ ಮಾಡುವುದಾಗಿ ಬಿಜೆಪಿ ಸಂಸದ, ಮತ್ತು ಶಾಸಕರು ಭರವಸೆ ನೀಡಿದ್ದರು.
ಜೊತೆಗೆ ಶಾಸಕ ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿ ರಚಿಸಲಾಗಿತ್ತು. ಅಭಿವೃದ್ಧಿ ಕಾಮಗಾರಿಗಳಿಗೆ ಯಾವುದೇ ತೊಂದರೆಯಾಗದಂತೆ ವರದಿಯಲ್ಲಿ ತಿದ್ದುಪಡಿ ಮಾಡಿ ಬಳಿಕ ಜಾರಿ ಮಾಡುವಂತೆ ಆಕ್ಷೇಪಣೆ ಸಲ್ಲಿಸಲಾಗಿತ್ತು. ಆದರೆ ಅದನ್ನು ಸ್ವೀಕರಿಸದೇ ವರದಿಯನ್ನು ಜಾರಿ ಮಾಡಲು ಮುಂದಾಗಿರುವುದು ಕೊಡಗಿನ ಜನತೆಯನ್ನು ಆತಂಕಕ್ಕೆ ದೂಡಿದೆ. ಹೀಗಾಗಿ ವರದಿಯನ್ನು ಜಾರಿ ಮಾಡುವುದಕ್ಕಿಂತ ಮೊದಲು ಮತ್ತೊಂದು ಸಮಿತಿ ರಚಿಸಿ ಪಶ್ಚಿಮಘಟ್ಟದಲ್ಲಿನ ಗ್ರಾಮಗಳ ಅಭಿವೃದ್ಧಿಗೆ ಯಾವುದೇ ತಡೆಯಾಗದಂತೆ ಮತ್ತೊಂದು ತಿದ್ದುಪಡಿ ವರದಿ ಸಲ್ಲಿಸಲು ಅವಕಾಶ ನೀಡುವಂತೆ ರೈತರು ಆಗ್ರಹಿಸುತ್ತಿದ್ದಾರೆ.