ಕೊಡಗು: ಕೊಳೆತ ತರಕಾರಿ, ಬೂಸ್ಟ್ ಬಂದಿರುವ ತೆಂಗಿನಕಾಯಿ, ಅಡುಗೆಗೆ ಯೋಗ್ಯವಲ್ಲದ ಎಣ್ಣೆ, ಮಾಸ್ಕ್ ಹಾಕದ ಜನ, ಶುಚಿತ್ವ ಕಾಪಾಡದ ಕೆಲಸಗಾರರು.. ಇಂತಹ ಹೋಟೆಲ್‌ಗಳಿಗೆ ವೈದ್ಯಾಧಿಕಾರಿಗಳು ದಾಳಿ ಮಾಡಿ ಕೆಲವು ಹೋಟೆಲ್‌ಗಳನ್ನು ಸೀಲ್ ಮಾಡಿ ದಂಡ ಹಾಕಿರುವ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.
ಲಾಕ್‍ಡೌನ್ ವೇಳೆ ಕೋವಿಡ್ ಆಸ್ಪತ್ರೆ, ಪೊಲೀಸ್ ಹಾಗೂ ಫ್ರಂಟ್‌ಲೈನ್ ವಾರಿಯರ್ಸ್‍ಗಳಿಗೆ ಆಹಾರ ಪೂರೈಕೆ ಮಾಡುವ ನಿಟ್ಟಿನಲ್ಲಿ ನಗರದ ಕೆಲವು ಹೋಟೆಲ್‍ಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗಿದೆ. ಆದರೆ ಇಲ್ಲಿ ಸ್ವಚ್ಛತೆ ಇಲ್ಲ ಎನ್ನುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರಿಗೆ ಸಾರ್ವಜನಿಕರೊಬ್ಬರು ವಾಟ್ಸಾಪ್ ಮೂಲಕ ದೂರು ಕೊಟ್ಟಿದ್ದರು. ಇದನ್ನು ಗಮನಿಸಿದ ಸಚಿವರು, ಡಿಎಚ್‍ಒ ಡಾ. ಮೋಹನ್ ಅವರಿಗೆ ಕರೆ ಮಾಡಿ, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರು.
ಆಹಾರ ಸುರಕ್ಷತಾ ಅಧಿಕಾರಿ ಅನಿಲ್ ಧವನ್ ಜತೆ ದಾಳಿ ನಡೆಸಿದಾಗ ವಾಸ್ತವತೆ ತೆರೆದುಕೊಂಡಿದೆ. ಕೆಲವು ಹೋಟೆಲ್‍ಗಳು ಲೈಸನ್ಸ್ ರಿನೀವಲ್ ಮಾಡದೆ ಕಾರ್ಯನಿರ್ವಹಿಸುತ್ತಿದ್ದವು. ಬಹುತೇಕ ಕಡೆ ಕೋವಿಡ್ ಮುಂಜಾಗ್ರತೆ ಕ್ರಮಗಳನ್ನೇ ಕೈಗೊಂಡಿರಲಿಲ್ಲ. ತರಕಾರಿ ದಾಸ್ತಾನು ಬೇಕಾಬಿಟ್ಟಿ ಮಾಡಲಾಗಿತ್ತು. ಒಳಗೆಲ್ಲ ಪರಿಶೀಲನೆ ನಡೆಸಿದ ಅಧಿಕಾರಿಗಳು ಮಾಲೀಕರಿಗೆ ಎಚ್ಚರಿಕೆ ನೀಡಿ, ಅವ್ಯವಸ್ಥೆ ಸರಿಪಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮುಂದಿನ ದಿನದಲ್ಲಿ ಪರಿಶೀಲನೆಗೆ ಬಂದಾಗ ಲೋಪ ಕಂಡುಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ: ಬದುಕು ಕಟ್ಟಿಕೊಳ್ಳಲು ಆಟೋ ಓಡಿಸಲು ನಿಂತ ನಾರಿ.. ಕಷ್ಟಕ್ಕೆ ಸವಾಲಾಗಿ ನಿಂತ ಧೀರೆ