ಕೊಡಗು: ಶಾಸಕ ಅಪ್ಪಚ್ಚು ರಂಜನ್ ದೂರವಾಣಿ ಮೂಲಕ ಮಾತನಾಡಿದ್ದಾರೆ ಮತ್ತು ಕೆ.ಜಿ.ಬೋಪಯ್ಯ ಬಂದು ಸೇರಲಿದ್ದಾರೆ. ಅವರಿಗೆ ಸಚಿವ ಸ್ಥಾನ ವಂಚಿತರಾಗಿರುವುದಕ್ಕೆ ಯಾವುದೇ ಅಸಮಾಧಾನವಿಲ್ಲ ಎಂದು ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕಳೆದ ಬಾರಿ ಕೊಡಗಿನಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪಕ್ಕೆ ಒಳಗಾದ ನಿರಾಶ್ರಿತರಿಗೆ ಕರ್ಣಂಗೇರಿ ಹಾಗೂ ಜಂಬೂರಿನಲ್ಲಿ ನಿರ್ಮಿಸುತ್ತಿರುವ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾರಣಾಂತರಗಳಿಂದ ಶಾಸಕ ಅಪ್ಪಚ್ಚು ರಂಜನ್ ಬೆಂಗಳೂರಿನಲ್ಲಿ ಇರುವುದಾಗಿ ಫೋನ್ ಮೂಲಕ ತಿಳಿಸಿದ್ದಾರೆ. ಅವರು ನನ್ನ ಬಳಿ ಅಸಮಾಧಾನ ವ್ಯಕ್ತಪಡಿಸಿಲ್ಲ. ಒಂದು ವೇಳೆ ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ ಇದ್ದರೆ ಅದು ಸಹಜ. ಏಕೆಂದರೆ ಅವರು ಅನುಭವಿಗಳು. ಎಲ್ಲಾ ರೀತಿಯಲ್ಲೂ ದಕ್ಷತೆ ಹೊಂದಿದ್ದಾರೆ. ಇವತ್ತಿನ ರಾಜಕೀಯ ಸನ್ನಿವೇಶದಲ್ಲಿ ಸಚಿವ ಸ್ಥಾನ ಕೈ ತಪ್ಪಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ನಾಯಕರು ಗಮನದಲ್ಲಿಟ್ಟುಕೊಂಡು ಇದನ್ನು ಬಗೆಹರಿಸುವ ವಿಶ್ವಾಸವಿದೆ ಎಂದರು.
ಮನೆಗಳ ಹಸ್ತಾಂತರಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಮಳೆಗಾಲ ಇದ್ದುದ್ದರಿಂದ ಮನೆಗಳ ಹಂಚಿಕೆ ಸ್ವಲ್ಪ ತಡವಾಗಿದೆ. ಮೂಲ ಸೌಕರ್ಯಗಳನ್ನು ಹೊರತುಪಡಿಸಿ, ನಿರಾಶ್ರಿತರಿಗೆ ಇಲ್ಲಿ ನಿರ್ಮಿಸುತ್ತಿರುವ ಬಹುತೇಕ ಮನೆಗಳನ್ನು ಸಿಎಂ ಗಮನಕ್ಕೆ ತಂದು ಸದ್ಯದಲ್ಲೇ ಹಸ್ತಾಂತರಿಸಲಾಗುವುದು. ಈಗಾಗಲೇ ಕರ್ಣಂಗೇರಿಯಲ್ಲಿ 35 ಮನೆಗಳು ಪೂರ್ಣಗೊಂಡಿದ್ದು, 150 ಅರ್ಜಿಗಳು ಬಂದಿವೆ. ಇವುಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿ ಬಗೆಹರಿಸುವರು ಎಂದರು.