ಕೊಡಗು: ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ 24 ಪರಿಣಿತರ ಎನ್ಡಿಆರ್ಫ್ ತಂಡ ಆಂಧ್ರದ ವಿಜಯವಾಡದಿಂದ ಆಗಮಿಸಿತು. ಈ ತಂಡ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಿದೆ. ಅಗತ್ಯ ಉಪಕರಣಗಳೊಂದಿಗೆ ಆಗಮಿಸಿದ ಪರಿಣಿತರು ಮಡಿಕೇರಿ ನಗರದ ಮೈತ್ರಿ ಹಾಲ್ ನಲ್ಲಿ ವಾಸ್ತವ್ಯ ಹೂಡಿದ್ದು ಮಳೆಗಾಲದ ಸಿದ್ಧತೆಯಲ್ಲಿ ತೊಡಗಿದೆ.
ಕಳೆದ ಮೂರು ವರ್ಷಗಳಿಂದ ಪ್ರಕೃತಿ ವಿಕೋಪ, ಜಲ ಪ್ರಳಯದಿಂದ ಕೊಡಗು ನಲುಗಿದೆ. ಸಣ್ಣ ಮಳೆಗೂ ಭಯ ಪಡುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಪ್ರತಿ ವರ್ಷದಂತೆ ಈ ಬಾರಿ ಕೂಡ ಜಿಲ್ಲೆಗೆ ಎನ್ಡಿಆರ್ಎಫ್ ತಂಡ ಬಂದಿದ್ದು, ಜನರ ಭಯ ಕೊಂಚ ದೂರವಾದಂತಿದೆ.
ಇದನ್ನೂ ಓದಿ: 44 ಭೂಕುಸಿತ, 43 ಜಲಪ್ರವಾಹದ ಸ್ಥಳ ಗುರುತಿಸಿದ ಕೊಡಗು ಜಿಲ್ಲಾಡಳಿತ : ಆತಂಕದಲ್ಲಿ ಜನತೆ
ಸಾಕಷ್ಟು ಕಡೆಗಳಲ್ಲಿ ಪ್ರವಾಹ ಸಂದರ್ಭದಲ್ಲಿ ಭಾಗಿಯಾಗಿದ್ದ ನುರಿತರು ಈ ತಂಡದಲ್ಲಿದ್ದಾರೆ. ಕಳೆದ ಬಾರಿ ಕೂಡ ಜಿಲ್ಲೆಗೆ ಆಗಮಿಸಿದ್ದ ಸಿಬ್ಬಂದಿ ಈ ಸಲವೂ ತಂಡದ ಭಾಗವಾಗಿದ್ದಾರೆ. ಪ್ರವಾಹ, ಪ್ರಕೃತಿ ವಿಕೋಪ ಎದುರಾದಾಗ ಜನರನ್ನು ರಕ್ಷಿಸಲು ಬೇಕಾದ ಉಪಕರಣಗಳು ಇವರಲ್ಲಿವೆ. ಜಿಲ್ಲಾಡಳಿತ ಈಗಾಗಲೇ 43 ಪ್ರದೇಶಗಳನ್ನು ಪ್ರವಾಹ ಹಾಗೂ 44 ಪ್ರದೇಶಗಳನ್ನು ಭೂಕುಸಿತ ಪ್ರದೇಶಗಳೆಂದು ಗುರುತಿಸಿದೆ. ಅಂತಹ ಸೂಕ್ಷ್ಮ ಪ್ರದೇಶಗಳಿಗೆ ಈ ತಂಡ ತೆರಳಿ ಪರಿಶೀಲನೆ ನಡೆಸಲಿದೆ.