ಕೊಡಗು: ಜಿಲ್ಲೆಯಲ್ಲಿ ಮಳೆ ಆರಂಭವಾಗುತ್ತಿರುವ ಹಿನ್ನೆಲೆ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪವನ್ನು ಎದುರಿಸುವ ನಿಟ್ಟಿನಲ್ಲಿ ಎನ್ಡಿಆರ್ಎಫ್ ತಂಡ ಜಿಲ್ಲೆಗೆ ಆಗಮಿಸಿದೆ. ಮುಂಜಾನೆ ಕೊಂಚ ಬಿಡುವು ನೀಡಿದ್ದ ಮಳೆರಾಯ ಮತ್ತೆ ಆರ್ಭಟಿಸುತ್ತಿದ್ದಾನೆ.
![ndrf-team-came-to-kodagu-district](https://etvbharatimages.akamaized.net/etvbharat/prod-images/11776938_th-ws.jpg)
ತೌಕ್ತೆ ಚಂಡಮಾರುತದ ಪರಿಣಾಮ ಭಾರಿ ಗಾಳಿ ಸಹಿತ ಮಳೆ ಆರಂಭವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಮಳೆ ಹಿನ್ನೆಲೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ 10ನೇ ಬೆಟಾಲಿಯನ್ ಟೀಂ ಕಮಾಂಡರ್ ಬಲ್ಲು ಬಿಸ್ವಾಸ್ ಅವರನ್ನು ಒಳಗೊಂಡ 20 ಮಂದಿ ಎನ್ಡಿಆರ್ಎಫ್ ತಂಡ ಜಿಲ್ಲೆಗೆ ಆಗಮಿಸಿದೆ. ತಲಕಾವೇರಿ, ಭಾಗಮಂಡಲ, ನಾಪೋಕ್ಲು ಸೋಮವಾರಪೇಟೆ ಭಾಗದಲ್ಲಿ ಮಳೆ ಜೋರಾಗಿದೆ. ಕಾವೇರಿ ನೀರಿನ ಮಟ್ಟ ಏರಿಕೆಯಾಗಿದ್ದು, ಉಪನದಿಗಳು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ನಾಪೋಕ್ಲು ಸಮೀಪದ ಬಲಮುರಿಯಲ್ಲಿ ಸೇತುವೆಯ ಸಮಕ್ಕೆ ನೀರು ಹರಿಯುತ್ತಿದೆ. ಸೇತುವೆ ಮುಳುಗುವ ಹಂತದಲ್ಲಿದ್ದು, ಜನಸಂಚಾರ ಕಷ್ಟಕರವಾಗಿದೆ.
ಸತತ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸುತ್ತಿದ್ದು, ಕೆಲವು ಕಡೆ ಬೆಟ್ಟ ಕುಸಿತವಾಗಿದೆ. ವಾಸ ಮಾಡುವ ಮನೆಗಳು ಮಣ್ಣಿನಲ್ಲಿ ಸಿಲುಕಿ ಹಲವರು ಪ್ರಾಣ ಕಳೆದುಕೊಂಡಿದ್ದರು. ಇನ್ನೂ ಕೆಲವು ಕಡೆ ಕಾವೇರಿ ನೀರಿನ ಪ್ರಮಾಣ ಹೆಚ್ಚಾಗಿ ನದಿ ಪಾತ್ರದಲ್ಲಿ ವಾಸ ಮಾಡುವ ಮನೆಗಳು ನೀರಿನಲ್ಲಿ ಮುಳುಗಿ ಜನರು ಮನೆಗಳನ್ನ ಕಳೆದುಕೊಂಡು ಬೀದಿಪಾಲಾಗಿದ್ದರು. ನೀರಿನಲ್ಲಿ ಸಿಲುಕಿದ್ದ ಸಮಯದಲ್ಲಿ ಎನ್ಡಿಆರ್ಫ್ ತಂಡ ಜನರ ನೆರವಿಗೆ ಬಂದು ಜನರನ್ನು ರಕ್ಷಿಸಿತ್ತು. ಈಗ ಜಿಲ್ಲೆಯಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ NDRF ತಂಡವನ್ನು ನೀಯೋಜನೆ ಮಾಡಿದೆ.
ಇದನ್ನೂ ಓದಿ : ದಕ್ಷಿಣದ ಐದು ರಾಜ್ಯಗಳಲ್ಲಿ ತೌಕ್ತೆ ಅಬ್ಬರ: ರಕ್ಷಣಾ ಕಾರ್ಯಾಚರಣೆಗೆ ಎನ್ಡಿಆರ್ಎಫ್ ಸನ್ನದ್ಧ