ಕೊಡಗು: ಕಳೆದ ವರ್ಷ ಸುರಿದ ವಿಪರೀತ ಮಳೆಯಿಂದಾಗಿ ಅನ್ನದಾತ ಬೆಳೆದಿದ್ದ ಫಸಲು ಅತಿವೃಷ್ಟಿಗೆ ಸಿಲುಕಿ ಮಣ್ಣುಪಾಲಾಗಿ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿತ್ತು. ಈ ವರ್ಷವೂ ವರುಣ ಮತ್ತೊಮ್ಮೆ ಸಂಕಷ್ಟದ ಸುಳಿಗೆ ಸಿಲುಕಿಸುತ್ತಾನೇನೋ ಎಂಬ ಆತಂಕದಲ್ಲೇ ಕೊಡಗು ಜನತೆ ಇದ್ದಾರೆ.
ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಕಡಿಮೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಗೆ ಮುಂಗಾರು ಸ್ವಲ್ಪ ತಡವಾಗಿಯೇ ಕಾಲಿಟ್ಟಿದ್ದು, ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಗರಿಗೆದರುತ್ತಿವೆ. ಜಿನುಗುತ್ತಿರುವ ಮಳೆಯಲ್ಲೇ ಅನ್ನದಾತ ಮೈ ಚಳಿ ಬಿಟ್ಟು ಬದುಗಳನ್ನು ಸವರಿ, ಟಿಲ್ಲರ್ಗಳಿಂದ ಜಮೀನನ್ನು ಹದಗೊಳಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಜೂನ್ ಮೊದಲ ವಾರದಲ್ಲೇ ಸಾಕಷ್ಟು ಮಳೆ ಸುರಿಯುತ್ತಿದ್ದ ಕೊಡಗಿಗೆ ಈ ವರ್ಷ ಜುಲೈ ತಿಂಗಳಲ್ಲಿ ಮಳೆ ಕಾಲಿಟ್ಟಿದೆ. ವಾಡಿಕೆಯಷ್ಟು ಮಳೆ ಬಾರದಿದ್ದರೂ ಕೃಷಿಗೆ ಯೋಗ್ಯವಾದ ಸಾಧಾರಣ ಮಳೆ ಸುರಿಯುತ್ತಿದೆ.
ಅಂದಹಾಗೆ ಜಿಲ್ಲೆಯಲ್ಲಿ ಒಟ್ಟು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಒಂದೆಡೆ ಆನೆ, ಕಾಡು ಹಂದಿಗಳು ಹಾಗೂ ಕಾಡೆಮ್ಮೆಗಳ ಕಾಟ, ಮತ್ತೊಂದೆಡೆ ಮಳೆಯ ವೈಪರಿತ್ಯ ಹಾಗೂ ಕಾರ್ಮಿಕರ ಕೊರತೆಯಿಂದ ಹೈರಾಣಗಿರುವ ಹಲವು ಮಂದಿ ಭತ್ತದ ಕೃಷಿಯಿಂದಲೇ ಹಿಮ್ಮುಖರಾಗಿದ್ದಾರೆ. ಹೀಗಾಗಿ ಈ ಬಾರಿ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಜಿಲ್ಲೆಗೆ ಒಂದು ತಿಂಗಳು ತಡವಾಗಿ ಮುಂಗಾರು ಪ್ರವೇಶಿಸಿದ್ದರೂ ಅನ್ನದಾತ ಭರವಸೆ ಇಟ್ಟುಕೊಂಡು ಭತ್ತ ಬೆಳೆಯಲು ಮುಂದಾಗಿದ್ದು, ಕಳೆದ ವರ್ಷದಂತೆ ಮಳೆರಾಯ ಅತಿವೃಷ್ಟಿ ಅಥವಾ ಅನಾವೃಷ್ಟಿ ಸೃಷ್ಟಿಸದಿರಲಿ ಎನ್ನುತ್ತಾರೆ ರೈತ ಗಣಪತಿ.