ಕೊಡಗು : ಹಸುಗಳಿಗೆ ಗುಂಡಿಕ್ಕಿ ಕುತ್ತಿಗೆ ಕುಯ್ದು ಕೊಂದಿರುವ ಘಟನೆ ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹೆಬ್ಬಾಲೆ ದೇವರಪುರದ ಎಸ್ಟೇಟ್ನಲ್ಲಿ ನಡೆದಿದೆ. ಮೇಯಲು ಬಿಟ್ಟಿದ್ದ ಮೂರು ಹಸುಗಳ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂದು ಕತ್ತು ಕುಯ್ದಿದ್ದಾರೆ.
ರಮೇಶ್ ಸಾಬು ಗಣಪತಿ ಮತ್ತು ಎರವರ ಚುಬ್ರ ಎಂಬುವರಿಗೆ ಸೇರಿದ ಹಸುಗಳನ್ನು ಕೊಲ್ಲಲಾಗಿದೆ. ನಿತ್ಯ ಮೇಯಲು ಹೋಗಿ ಸಂಜೆ ಮನೆಗೆ ಬರುತ್ತಿದ್ದ ಹಸುಗಳು ಬಾರದ ಕಾರಣ ಮಾಲೀಕ ರಮೇಶ್ ಹುಡುಕಿಕೊಂಡು ಹೋಗಿದ್ದರು. ಈ ವೇಳೆ ಪಕ್ಕದ ಕಾಡಿನಲ್ಲಿ ಮೂರು ಹಸುಗಳ ಮೃತದೇಹ ದೊರೆತಿವೆ. ಹಸುಗಳನ್ನು ಗುಂಡು ಹಾರಿಸಿ ಕೊಂದು ಕುತ್ತಿಗೆ ಕತ್ತರಿಸಿರಬಹುದೆಂದು ಶಂಕಿಸಲಾಗಿದೆ.
ಓದಿ : ಹಗರಿಬೊಮ್ಮನಹಳ್ಳಿ: ಲಾರಿ ಹರಿದು ಬೈಕ್ ಸವಾರ ಸಾವು
ಮಾಂಸಕ್ಕಾಗಿ ಈ ಕೃತ್ಯ ನಡೆಸಿರಬಹುದು ಎಂದು ಹೇಳಲಾಗ್ತಿದೆ. ಜಿಲ್ಲೆಯ ಅಮ್ಮತ್ತಿ ಭಾಗದಲ್ಲಿ ಈ ಹಿಂದೆ ಇದೇ ರೀತಿ ಎರಡು ಹಸುಗಳನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಮತ್ತೆ ಅದೇ ರೀತಿಯ ಘಟನೆ ನಡೆದಿರುವುದು ಆತಂಕ ಹೆಚ್ಚು ಮಾಡಿದೆ.
ಜಿಲ್ಲೆಯಲ್ಲಿ ಹಸುಗಳನ್ನು ಕೊಂದಿರುವುದಕ್ಕೆ ವಿರೋಧ ವ್ಯಕ್ತವಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಒತ್ತಾಯಿಸಿದ್ದಾರೆ. ಪ್ರಕರಣ ಸಂಬಂಧ ಪೋನ್ನಂಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.