ಕೊಡಗು: ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಇಂದು ಮನೆಗಳ ಹಸ್ತಾಂತರಿಸಿದರು.
2018ರಲ್ಲಿ ಜಲ ಪ್ರಳಯವಾಗಿ ಕೊಡಗು ಜಿಲ್ಲೆಯಲ್ಲಿ ಅನೇಕರು ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದರು. ಇವರಿಗೆಲ್ಲ ಸೂರು ಕಲ್ಪಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಅದರಂತೆ ಈ ಹಿಂದೆಯೂ ಹಲವರಿಗೆ ಮನೆ ನಿರ್ಮಾಣ ಮಾಡಿಕೊಟ್ಟಿದ್ದು, ಇಂದು ಬಿಳಿಗೆರೆ ಗ್ರಾಮದ 5ಎಕರೆಯಲ್ಲಿ ನಿರ್ಮಾಣಗೊಂಡ 22 ಮನೆಗಳನ್ನು ಸಂತ್ರಸ್ತರಿಗೆ ಸಚಿವ ಸೋಮಣ್ಣ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಅವರು, ಫಲಾನುಭವಿಗಳು ಮನೆಗಳನ್ನು ಯಾವುದೇ ಕಾರಣಕ್ಕೂ ಮಾರಬೇಡಿ, ಮುಂದಿನ ದಿನಗಳಲ್ಲಿ ಉಳಿದ ನಿರಾಶ್ರಿತರಿಗೆ ಮನೆಗಳನ್ನು ಮಹಿಳೆಯರ ಹೆಸರಿಗೆ ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲೆಯಲ್ಲಿ ನಿರಾಶ್ರಿತರಿಗೆ ನಿರ್ಮಿಸಲಾದ ಒಟ್ಟು 836 ಮನೆಗಳ ಪೈಕಿ ಇದುವರೆಗೆ 786 ಮನೆಗಳ ಹಸ್ತಾಂತರ ಮಾಡಲಾಗಿದೆ.
ಮನೆ ಹಸ್ತಾಂತರ ಸಂದರ್ಭ ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಅಪ್ಪಚ್ಚುರಂಜನ್, ಕೆ.ಜಿ ಬೋಪಯ್ಯ ಸುನಿಲ್ ಸುಬ್ರಹ್ಮಣಿ, ವೀಣಾ ಅಚ್ಚಯ್ಯ ಸೇರಿದಂತೆ ಜನಪ್ರತಿನಿಧಿಗಳು ಹಾಜರಿದ್ದರು.