ಮಡಿಕೇರಿ/ಕೊಡಗು: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೋವಿಡ್-19 ಪಾಸಿಟಿವಿಟಿ ಪ್ರಮಾಣವು ಶೇ.2 ಕ್ಕಿಂತ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ವಾರಾಂತ್ಯ ಕರ್ಫ್ಯೂ ಹಿಂಪಡೆಯುವಲ್ಲಿ ಸರ್ಕಾರದಿಂದ ಆದೇಶ ಬರಲಿದ್ದು, ಆ ದಿಸೆಯಲ್ಲಿ ಜಿಲ್ಲಾಧಿಕಾರಿಗಳು ಅಗತ್ಯ ತೀರ್ಮಾನ ತೆಗೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಲಹೆ ನೀಡಿದ್ದಾರೆ.
ನಗರದ ಜಿ.ಪಂ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಕೋವಿಡ್-19 ನಿಯಂತ್ರಣ ಹಾಗೂ ಲಸಿಕೆ ಅಭಿಯಾನ ಪ್ರಗತಿ ಸಂಬಂಧಿಸಿದಂತೆ ಮಾಹಿತಿ ಪಡೆದು ಸಚಿವರು ಮಾತನಾಡಿದರು. ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವಿಟಿ ಪ್ರಮಾಣವು 2 ಕ್ಕಿಂತ ಕಡಿಮೆ ಇರುವುದರಿಂದ ವಾರಾಂತ್ಯ ಕರ್ಫ್ಯೂ ತೆಗೆಯಬಹುದಾಗಿದೆ ಎಂದರು.
ಈ ಬಗ್ಗೆ ಧ್ವನಿಗೂಡಿಸಿದ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಎಂ.ಪಿ.ಅಪ್ಪಚ್ಚುರಂಜನ್ ಅವರು ವಾರಾಂತ್ಯ ಕರ್ಫ್ಯೂ ತೆಗೆದು, ಗಡಿಭಾಗದ ಚೆಕ್ಪೋಸ್ಟ್ಗಳಲ್ಲಿ ಬಿಗಿ ಕ್ರಮ ವಹಿಸುವಂತಾಗಬೇಕು ಎಂದು ಸೂಚಿಸಿದರು.
ಚೆಕ್ಪೋಸ್ಟ್ಗಳಲ್ಲಿ ಶೌಚಾಲಯ, ನೀರು, ವಿದ್ಯುತ್ ಮತ್ತಿತರ ಮೂಲ ಸೌಲಭ್ಯ ಕಲ್ಪಿಸುವಂತೆ ಕಳೆದ ಸಭೆಯಲ್ಲಿ ಸೂಚಿಸಿದ್ದರೂ ಸಹ ಸಮರ್ಪಕವಾಗಿ ಅನುಷ್ಠಾನ ಆಗದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ನೆರೆಯ ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಕಂಡು ಬಂದಿರುವುದರಿಂದ ಜಿಲ್ಲೆಯಲ್ಲಿಯೂ ಸಹ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ ಮತ್ತಿತರರು ಹಾಜರಿದ್ದರು.