ಕೊಡಗು: "ರಾಜ್ಯದಲ್ಲಿ ಕೊರೊನಾ ರೂಪಾಂತರಿ ಬಗ್ಗೆ ಯಾರೂ ಕೂಡ ಆತಂಕಪಡಬೇಕಿಲ್ಲ. ಆದರೆ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ ಮಾಡಲಾಗುತ್ತದೆ. ಇಂದಿನಿಂದಲೇ ರಾಜ್ಯ ಸರ್ಕಾರ ಆದೇಶ ಹೊರಡಿಸಲಿದೆ" ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಜಿಲ್ಲೆಯ ಕುಶಾಲನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮೊನ್ನೆ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದ್ದೇವೆ. ರವಿ ಅವರ ನೇತೃತ್ವದಲ್ಲಿ ನಿನ್ನೆಯೂ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಯಾವ ಕ್ರಮ ತೆಗೆದುಕೊಳ್ಳಬೇಕು ಚರ್ಚೆ ನಡೆಸಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರದ ಜೊತೆಗೂ ಚರ್ಚೆ ಮಾಡಿದ್ದಾರೆ" ಎಂದು ಹೇಳಿದರು.
"ಕೆಲವು ಸಲಹೆ ಮಾರ್ಗಸೂಚಿ ಪಡೆದಿದ್ದೇವೆ. 60 ವರ್ಷ ಮೇಲ್ಪಟ್ಟವರು ಮತ್ತು ಹೃದಯ, ಕಿಡ್ನಿ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ಜ್ವರ, ಕಫ, ಶೀತ ಇರುವಂತಹವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು. ಈಗಾಗಲೇ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಸಜ್ಜು ಆಗುವಂತೆಯೂ ಸೂಚನೆ ನೀಡಲಾಗಿದೆ. ಹಾಗೆಯೇ ಗಡಿ ಜಿಲ್ಲೆಗಳಾದ ಕೊಡಗು, ಮಂಗಳೂರು, ಚಾಮರಾಜನಗರದ ಭಾಗದಲ್ಲಿ ಹೆಚ್ಚಿನ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ" ಎಂದರು.
ಲೇಹರ್ ಸಿಂಗ್ ಜವಾಬ್ದಾರಿಯುತವಾಗಿ ಮಾತನಾಡಬೇಕು: ಸಂಸತ್‍ನಲ್ಲಿ ಸ್ಮೋಕ್ ಬಾಂಬ್ ವಿಚಾರದಲ್ಲಿ ಪ್ರತಾಪ್ ಸಿಂಹ ಅವರನ್ನು ಟ್ರ್ಯಾಪ್ ಮಾಡುವ ತಂತ್ರ ನಡೆದಿದೆ ಎಂಬ ಲೇಹರ್ ಸಿಂಗ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, "ಲೇಹರ್ ಸಿಂಗ್ ಅವರು ಸ್ವಲ್ಪ ಜವಾಬ್ದಾರಿಯುತವಾಗಿ ಮಾತನಾಡಬೇಕು. ಅವರನ್ನು ರಾಜ್ಯಸಭೆಗೆ ಕಳುಹಿಸಿರುವುದು ಹುಚ್ಚು ಹುಚ್ಚಾಗಿ ಮಾಡನಾಡಲು ಅಲ್ಲ. ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿ ಇರುವುದರಿಂದ ಸಂಸದ ಪ್ರತಾಪ್ ಸಿಂಹ ಅವರನ್ನು ರಕ್ಷಣೆ ಮಾಡುತ್ತಿದೆ" ಎಂದು ಹೇಳಿದರು.
"ಪ್ರತಾಪ್ ಸಿಂಹ ಅವರ ಜಾಗದಲ್ಲಿ ಕಾಂಗ್ರೆಸ್ ಸಂಸದ ಇದ್ದಿದ್ದರೆ ಉಚ್ಛಾಟಿಸುತ್ತಿದ್ದರು, ತನಿಖೆಗೆ ಒಳಪಡಿಸುತ್ತಿದ್ದರು. ದೇಶಾದ್ಯಂತ ಪ್ರತಿಭಟನೆ ಮಾಡಿ ಬಿಡುತ್ತಿದ್ದರು. ಆದರೆ ಇದೀಗ ಬಿಜೆಪಿಯವರೇ ಇರುವುದರಿಂದ ಅವರನ್ನು ರಕ್ಷಣೆ ಮಾಡಲಾಗುತ್ತಿದೆ. ಪ್ರತಾಪ್ ಸಿಂಹ ಅವರ ರಕ್ಷಣೆ ಮಾಡಲು ಬಿಜೆಪಿ ನಿಂತುಕೊಂಡಿದೆ. ಕಾಂಗ್ರೆಸ್‍ನವರ ಶಿಫಾರಸಿನಲ್ಲಿ ಕಿಡಿಗೇಡಿಗಳು ಸಂಸತ್ಗೆ ಹೋಗಿದ್ದರೆ ಪ್ರತಾಪ್ ಸಿಂಹ ಹೇಗೆ ಮಾತನಾಡುತ್ತಿದ್ದರು?. ಅವರು ಹೇಗೆ ಮಾತನಾಡುತ್ತಿದ್ದರೋ ಹಾಗೆ ಅವರ ವಿರುದ್ಧ ನಾವು ಮಾತನಾಡುತ್ತಿದ್ದೀವಿ. ಇದು ಗಂಭೀರ ಪ್ರಕರಣ ಪ್ರತಾಪ್ ಸಿಂಹ ಮೇಲೆ ಕ್ರಮ ತೆಗೆದುಕೊಳ್ಳಬೇಕು" ಎಂದು ಒತ್ತಾಯಿಸಿದರು.
"ಪ್ರಧಾನಿಯೇ ಗಂಭೀರ ಎಂದ ಮೇಲೆ ಯಾಕೆ ಕ್ರಮ ತೆಗೆದುಕೊಳ್ತಿಲ್ಲ?. ಈ ವಿಚಾರದ ಬಗ್ಗೆ ಹೋರಾಟ ಮಾಡಿದರೆ ಕಾಂಗ್ರೆಸ್ ಸಂಸದರನ್ನು ಅಮಾನತು ಮಾಡುತ್ತಾರೆ. ಆದರೆ, ಅದಕ್ಕೆ ಕಾರಣಕರ್ತರಾದವರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಾರೆ, ಇದು ಯಾವ ನ್ಯಾಯ" ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ರಾಜ್ಯದ ಹಿತಕ್ಕಿಂತ ಮೋದಿ ಟೀಕೆಯೇ ಸಿದ್ದರಾಮಯ್ಯಗೆ ದೊಡ್ಡ ಕೆಲಸವಾಗಿದೆ: ಆರ್ ಅಶೋಕ್