ಮಡಿಕೇರಿ/ಕೊಡಗು: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಆರೋಗ್ಯ ಇಲಾಖೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಉಚಿತವಾಗಿ ಕೊರೊನಾ ಟೆಸ್ಟ್ ಮಾಡಲು ಮುಂದಾಗಿದೆ.
ಜಿಲ್ಲಾಡಳಿತದ ಸೂಚನೆ ಮೇರೆಗೆ ಮಡಿಕೇರಿಯ ಮಾರುಕಟ್ಟೆ, ತ್ಯಾಗರಾಜ ಕಾಲೋನಿ ಹಾಗೂ ಮಹದೇವಪೇಟೆ ಹೀಗೆ ಹಲವೆಡೆ ಆರೋಗ್ಯ ಇಲಾಖೆಯ ಸಿಬ್ಬಂದಿ ಸ್ಥಳೀಯರ ಗಂಟಲು ದ್ರವವನ್ನು ಸಂಗ್ರಹಿಸುತ್ತಿದ್ದಾರೆ. ಅಲ್ಲದೇ ರ‍್ಯಾಪಿಡ್ ಪರೀಕ್ಷೆ ಬಳಿಕ ಸ್ಥಳದಲ್ಲೇ ಫಲಿತಾಂಶವನ್ನೂ ನೀಡುತ್ತಿದ್ದಾರೆ.
ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ಮತ್ತು ಟೆಸ್ಟ್‌ಗೆ ಹಾಜರಾಗುವವರ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ದೂರವಾಣಿ ಸಂಖ್ಯೆ ಪಡೆದು ಪರೀಕ್ಷಿಗೆ ಒಳಪಡಿಸುತ್ತಿದ್ದಾರೆ. ಬೆಳಗ್ಗೆಯಿಂದ ಸುಮಾರು 57 ಜನರನ್ನು ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಮಧ್ಯಾಹ್ನದ ಬಳಿಕ ಇತರೆ ಪ್ರದೇಶದಲ್ಲಿ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಒಂದು ವೇಳೆ ಕೊರೊನಾ ಲಕ್ಷಣ ಕಂಡುಬಂದರೇ ಅಂತಹವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ 385ಕ್ಕೆ ಏರಿಕೆಯಾಗಿದ್ದು, 8 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಮತ್ತಷ್ಟು ಸೋಂಕಿತರನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ಇಂತಹ ಕ್ರಮವನ್ನು ತೆಗೆದುಕೊಂಡಿದೆ. ಸ್ಥಳೀಯರು ಕೂಡ ಸ್ವಯಂ ಪ್ರೇರಿತರಾಗಿ ಗಂಟಲು ದ್ರವ ಪರೀಕ್ಷೆಗೆ ಮುಂದಾಗಿದ್ದಾರೆ.